ಹಾವುಕಡಿತ ಸಮಸ್ಯೆ ಮತ್ತು ಅರಿವು

ಭಾಗ ೧ – ಹಿನ್ನೆಲೆ ಮತ್ತು ಹಾವುಗಳ ಸಂಕ್ಷಿಪ್ತ ಪರಿಚಯ

ಹಾವು ಎಂದ ತಕ್ಷಣ ಸಾವು ಎಂದೇ ನಾವು ಭಯಭೀತರಾಗುತ್ತೇವೆ. ಆದರೆ ಹಾವುಗಳ ಬಗ್ಗೆ ವಿವರಗಳನ್ನು ತಿಳಿದುಕೊಂಡರೆ ಮತ್ತು ಹಾವುಕಡಿತಗಳಿಂದ ಬೇಕಾದ ರಕ್ಷಣೆಗಳನ್ನು ಮಾಡಿಕೊಂಡರೆ ಹಾವುಗಳ ಬಗ್ಗೆ ಇಷ್ಟು ಭಯ ಪಡ ಬೇಕಾಗಿಲ್ಲ. ಹಾವುಗಳು ಪ್ರಕೃತಿಯ ಒಂದು ಭಾಗ. ಇವುಗಳು ಸರೀಸೃಪ ಜಾತಿಗೆ ಸೇರಿದವು. ಕೈಕಾಲುಗಳ ಕುರುಹೂ ಇಲ್ಲದ ಪ್ರಾಣಿಗಳು. ಹಾವುಗಳು ನೆಲದ ಮೇಲೆ ಮತ್ತು ಮರದ ಮೇಲೂ ಹರಿಯಬಹುದಾದ ಹಾಗೂ ನೀರಿನಲ್ಲಿ ಈಜಬಲ್ಲವುಗಳಾಗಿವೆ. ನಾಗರಿಕತೆ ಬೆಳೆದು ಮಾನವ ಮನೆಗಳಲ್ಲಿ ವಾಸ ಮಾಡಲು ಆರಂಭಿಸಿದರೂ ಹಾವು ಮತ್ತು ಮನುಷ್ಯನ ಒಡನಾಟ ಅಂತ್ಯಗೊಳ್ಲಲಿಲ್ಲ. ಹಾವು ಕಡಿತಗಳು ಈಗಲೂ ಒಂದು ಸಮಸ್ಯೆ. ಭಾರತದಲ್ಲಿ ಹಾವುಕಡಿತದಿಂದಾಗಿ ಪ್ರತಿವರ್ಷ ಸಾಧಾರಣ ೫೦,೦೦೦ಜನರು ಸಾಯುತ್ತಾರೆ. ಎಲ್ಲಾ ಹಾವುಗಳು ಕಚ್ಚುವುದಿಲ್ಲ. ಕಚ್ಚಿದ ಎಲ್ಲ ಹಾವುಗಳು ವಿಷ ಸ್ರವಿಸುವುದಿಲ್ಲ ಆದರೆ ಹಾವು ಕಡಿತದಲ್ಲಿ ವಿಷ ದೇಹದ ಒಳಗೆ ಸ್ರವಿಸಲ್ಪಟ್ಟಾಗ ತಕ್ಷಣ ಸ್ಪಂದಿಸುವುದು ಮತ್ತು ಅದಕ್ಕೆ ಸೂಕ್ತವಾದ ಚಿಕಿತ್ಸೆಪಡೆಯುವುದು ಇನ್ನೂ ಒಂದು ದೊಡ್ಡ ಸವಾಲು ಆಗಿದೆ.

ಹಾವಿನ ಕಡಿತದ ಪರಿಣಾಮವು ಮುಖ್ಯವಾಗಿ ಹಾವಿನ ಗಾತ್ರ, ಹಾವಿನ ಜಾತಿಗಳು, ಹಾವು ಕಚ್ಚಲ್ಪಟ್ಟ ದೇಹದ ಭಾಗ, ವಿಷವು ಒಳಸೇರಲ್ಪಟ್ಟ ಪ್ರಮಾಣ, ಕಡಿತಕ್ಕೊಳ ಪಟ್ಟ ವ್ಯಕ್ತಿಯ ವಯಸ್ಸು, ಆರೋಗ್ಯ ಸ್ಥಿತಿಗಳು, ಚಿಕಿತ್ಸೆ ಪಡಕೊಳ್ಳಲು ತೆಗೆದುಕೊಳ್ಳುವ ಸಮಯ ಮತ್ತು ವೈದ್ಯಕೀಯ ಚಿಕಿತ್ಸೆಯ ಗುಣಮಟ್ಟ ಮುಂತಾದವುಗಳನ್ನು ಒಳಗೊಂಡಂತೆ ಇತರ ಹಲವಾರು ಸಂಗತಿಗಳ ಮೇಲೆ ಅವಲಂಬಿತವಾಗಿರುತ್ತದೆ.
ಕೆಲವು ಹಾವುಕಡಿತ ಒಬ್ಬ ವಯಸ್ಕ ವ್ಯಕ್ತಿಗೆ ಸಾಮಾನ್ಯ ಪರಿಣಾಮವಾದರೆ ಅದೇ ಹಾವುಕಡಿತ ಮಕ್ಕಳಿಗೆ ಘೋರ ಪರಿಣಾಮವಾಗಬಹುದು. ದೇಹದ ಇತರ ಭಾಗಕ್ಕೆ ಹಾವುಕಡಿತವಾಗುವುದಕ್ಕಿಂತ ಮುಖಕ್ಕೆ ಕಡಿತವಾದರೆ ಹೆಚ್ಚು ಹಾನಿಯಾಗಬಹುದು.
ಮುಖ್ಯವಾಗಿ ವಿವಿಧ ಹಾವುಗಳ ಬಗ್ಗೆ ತಿಳಿವಳಿಕೆ, ಹಾವುಕಡಿತ, ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸರಿಯಾದ ಅರಿವು ಪಡಕೊಂಡರೆ ಹಾವುಕಡಿತದ ಸಮಸ್ಯೆಯನ್ನು ನಿಭಾಯಿಸಬಹುದು.

ಭಾರತದ ವಿಷಪೂರಿತ ಹಾವುಗಳು

ಹಾವು ಕಡಿತದ ಪ್ರಕರಣಗಳಲ್ಲಿ ಈ ಕೆಳಗಿನ ಮುಖ್ಯ ವಿಷಪೂರಿತ ಹಾವುಗಳು  ಕಾರಣಗಳಾಗಿರುತ್ತವೆ.

ಮುಖ್ಯ ವಿಷಪೂರಿತ ಹಾವುಗಳು

1) ನಾಗರ ಹಾವು ( najanaja )
2) ಸಾಮಾನ್ಯ ಕಟ್ಟು ಹಾವು ( Bungaruscaeruleus )
3) ರಸೆಲ್ ವೈಪರ್ ( Daboiarusselii )
4) ಸಾ-ಸ್ಕೇಲ್ಡ್ ವೈಪರ್ ( Echiscarinatus )
5) ಕಾಳಿಂಗ ಸರ್ಪ  (ಸಾಮಾನ್ಯವಾಗಿ ವಿರಳ)

ಇತರ ವಿಷಪೂರಿತ ಹಾವುಗಳು

1) ಹಿಮಾಲಯ ಪಿಟ್ ವೈಪರ್(Gloydiushimalayanus )
2) ಬ್ಯಾಂಡೆಡ್ ಕಟ್ಟುಹಾವು
3) ಬಿದಿರು ಪಿಟ್ ವೈಪರ್ ( Trimersurusgramineus )
4) ಸ್ಲೆಡರ್ ಹವಳದಹಾವು ( Callophismelanurus )
5) ಹುಕ್ ಮೂಗಿನ ಸಮುದ್ರ ಹಾವು ಅಥವಾ ಕೊಕ್ಕಿನ ಸಮುದ್ರ ಹಾವು (Enhydrinaschistosa )
6) ಡ್ವಾರ್ಫ್ ಸಮುದ್ರ ಹಾವು ( Hydrophiscaerulescens )

ನಾಗರಹಾವು

ನಾಗರ ಹಾವುಗಳು ಅಂಡೋತ್ಪಾದಕ ಜಾತಿಗೆ ಸೇರುತ್ತವೆ. ನಾಗರ ಹಾವು ತನ್ನ ಹೆಡೆಯ ವಿಶಿಷ್ಟ ರಚನೆಯಿಂದಾಗಿ ಇತರ ಹಾವುಗಳಿಂದ ನೋಡಲು ಭಿನ್ನವಾಗಿದೆ. ತನಗೆ ಅಪಾಯ ಉಂಟಾಗುವ ಸಂದರ್ಭದಲ್ಲಿ ದೇಹದ ಮುಂಭಾಗವನ್ನು ಎತ್ತಿ ಹಿಡಿದು ಕುತ್ತಿಗೆಯಲ್ಲಿರುವ ಪಕ್ಕೆಲುಬುಗಳನ್ನು ಹರಡಿಸಿದಾಗ ಹೆಡೆಯು ರೂಪುಗೊಳ್ಳುತ್ತದೆ.
ಸಾಮಾನ್ಯವಾಗಿ ನಾಗರ ಹಾವು ಹಳದಿ ಬಣ್ಣದ್ದಾಗಿದ್ದರೂ ಕೆಲವು ಕಂದು ಕಪ್ಪು ಕೆಂಪು ಛಾಯೆಗಳಲ್ಲೂ ಇರುತ್ತವೆ.
ಹೆಡೆಯ ಮೇಲೆ ಎರಡು ಹನಿಗಳ ರೂಪದಲ್ಲಿರುವ ಆಕೃತಿಗಳನ್ನು ಸೇರಿಸುವ ಒಂದು ವಕ್ರ ರೇಖೆ ಇದ್ದು, ಇದು ಕನ್ನಡಕದ ಚಿತ್ರವನ್ನು ಹೋಲುತ್ತದೆ.
ನಾಗರ ಹಾವುಗಳು  ಅರಣ್ಯ, ಬಯಲುಪ್ರದೇಶ, ಹೊಲ ಗದ್ದೆ, ನಗರದ ಹೊರವಲಯದಲ್ಲಿರುವ ಜನಭರಿತ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಈ ಜಾತಿ ಹಾವುಗಳು ಸಾಮಾನ್ಯವಾಗಿ ಇಲಿ, ಕಪ್ಪೆ, ಪಕ್ಷಿ ಹಾಗೂ ಇತರ ಹಾವುಗಳನ್ನು ತಿಂದು ಜೀವಿಸುತ್ತವೆ. ಜನರು ವಾಸಿಸುವ ವಲಯಗಳಲ್ಲಿ ಇಲಿಗಳ ಸಾಂದ್ರತೆ ಹೆಚ್ಚಾಗಿರುವ ಪ್ರದೇಶದಲ್ಲಿ ಇವು ವಾಸವಾಗಿರುತ್ತದೆ.ಇವು ರಾತ್ರಿ ಸಮಯದಲ್ಲಿ ಕಾಣ ಸಿಗುವುದು ವಿರಳ.
ನಾಗರಹಾವಿನ ಮರಿಗಳ ವಿಷಗ್ರಂಥಿಗಳು ಕ್ರಿಯಾತ್ಮಕವಾಗಿರುವುದರಿಂದ ಅವುಗಳು ಕೂಡಾ ವಿಷಪೂರಿತವಾಗಿವೆ.
ಸಾಮಾನ್ಯ ಕಟ್ಟಿನ ಹಾವು
ಇದು ಕಡಂಬಳ ಅಥವಾ ಕಟ್ಟಬಳಕ್ಕಾರಿ ಎಂದು ಸ್ಥಳಿಯವಾಗಿ ಕರೆಯಲ್ಪಡುತ್ತದೆ. ಇದರ ತಲೆ ಚಪ್ಪಟೆಯಾಗಿದ್ದು  ಕುತ್ತಿಗೆ ಸ್ಪಷ್ಟವಾಗಿರುವುದಿಲ್ಲ. ದೇಹವು ನಳಿಕೆಯಾಕಾರದಲ್ಲಿದೆ. ಬಾಲದ ತುದಿಯು ಮೊಂಡಾಗಿ ಚಿಕ್ಕದಾಗಿದೆ. ಕಣ್ಣುಗಳು ಚಿಕ್ಕದಾಗಿದ್ದು ಕಣ್ಣ ಪಾಪೆ ದುಂಡಗಿರುತ್ತವೆ ಈ ಹಾವುಗಳು ಕಪ್ಪು ಅಥವಾ ನೀಲಿ ಬಣ್ಣದವುಗಳಾಗಿದ್ದು ಮೈಮೇಲೆ ಸುಮಾರು ೪೦ ತೆಳುವಾದ ಬಿಳಿ ಅಡ್ಡಪಟ್ಟಿಗಳು ಕಾಣಬರುತ್ತವೆ..
ಇವುಗಳು ಹೊಲಗದ್ದೆ, ಕಡಿಮೆ ಪೊದೆಗಳು ಇರುವ ಕಾಡು ಹಾಗೂ ಜನವಾಸ ಯೋಗ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಇವು ಮನೆಗಳ ಒಳಗೆ, ಗೆದ್ದಲು ರಾಶಿ, ಇಟ್ಟಿಗೆ ರಾಶಿಗಳು, ಇಲಿಬಿಲಗಳು ಇರುವಲ್ಲಿ ಕೆಲವೊಮ್ಮೆ ನೀರಿನಲ್ಲಿ ಅಥವಾ ನೀರಿನ ಮೂಲದಲ್ಲಿ ಕೂಡ ಕಾಣಸಿಗುತ್ತವೆ.
ಸಾಮಾನ್ಯವಾಗಿ ಇವು ಹಗಲಿನಲ್ಲಿ ಜಡವಾಗಿರುತ್ತವೆ. ಇಲಿ ಬಿಲಗಳು, ಸಡಿಲ ಮಣ್ಣು,  ಭಗ್ನಾವಶೇಷಗಳ ಅಡಿಯಲ್ಲಿ ಮರೆಯಾಗಿ ಇರುತ್ತವೆ. ಆದುದರಿಂದ ಇವು ಹೆಚ್ಚಾಗಿ ಕಾಣಸಿಗುವುದಿಲ್ಲ. ಇವು ಹೆಚ್ಚಾಗಿ ತನ್ನ ಮೈಯನ್ನು ಸುರುಳಿಯಾಕಾರದಲ್ಲಿ ಚೆಂಡಿನಂತೆ ಸುತ್ತಿ ತಲೆಯನ್ನು ಮರೆ ಮಾಡಿಕೊಂಡಿರುತ್ತವೆ. ಈ ಸಮಯದಲ್ಲಿ ಸಣ್ಣ ಪ್ರಮಾಣದ ಪ್ರಚೋದನೆಗೆ ಅವು ವಿಶೇಷ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಹೆಚ್ಚಾಗಿ ಪ್ರಚೋದಿಸಿದರೆ ಅವು ಕಚ್ಚುವುದಕ್ಕೆ ತಯಾರು ಮಾಡುತ್ತವೆ. ಆದರೆ ರಾತ್ರಿ ಸಮಯದಲ್ಲಿ ಇವು ಹೆಚ್ಚು ಸಕ್ರಿಯವಾಗಿದ್ದು   ಜೋರಾಗಿ ಬುಸುಗುಟ್ಟಿ ತಪ್ಪಿಸಿಕೊಳ್ಳುತ್ತವೆ. ಅಥವಾ ಚಲಿಸದೆ ಸ್ಥಿರವಾಗಿರುತ್ತವೆ. ಕೆಲವೊಮ್ಮೆ ಅವುಗಳಿಗೆ ತೊಂದರೆ ಕೊಟ್ಟ ಕಡೆಗೆ ಕಚ್ಚುತ್ತವೆ. ಸಿಟ್ಟುಗೊಂಡ ಹಾವುಗಳು ತಮ್ಮ ತಲೆಯನ್ನು ಅವಿತಿಟ್ಟು ದೇಹವನ್ನು ಚಪ್ಪಟೆಯಾಗಿಸಿ ಕ್ಷಿಪ್ರ ಚಲನಗಳನ್ನು ಮಾಡುತ್ತವೆ.
ರಸ್ಸೆಲ್ ವೈಪರ್ ಮಂಡಲದ ಹಾವು
ಈ ಹಾವು ಇತರ ವೈಪರ್ ಹಾವುಗಳಿಗಿಂತ ಕೃಶವಾಗಿದೆ. ಹಾವಿನ ತಲೆ  ಚಪ್ಪಟೆ ಯಾಗಿದ್ದು ತ್ರಿಕೋನ ಆಕಾತ್ರದಲ್ಲಿದೆ.ಇದನ್ನು ವಿಶೇಷವಾಗಿ ಕುತ್ತಿಗೆಯಿಂದ ಗುರುತಿಸಬಹುದು. ದೇಹವು ದಪ್ಪನಾಗಿದ್ದು ಅಡ್ಡಛೇದವು ವೃತ್ತಾಕಾರದಲ್ಲಿದೆ. ಹಾವಿನ ಬೆನ್ನಿನ ಭಾಗ ಕಡಿದಾದ ಹಳದಿ ಕಡು ಕಂದು ಬಣ್ಣದಿಂದ ಕೂಡಿದ್ದು ದೇಹದ ಮೇಲೆ ಓಡುವ ಮೂರು ಸರಣಿಗಳಲ್ಲಿ ಕಡುಕಂದು ಚುಕ್ಕಿಗಳಿರುತ್ತವೆ
ಇದು ಹೆಚ್ಚಾಗಿ ಹುಲ್ಲುಗಾವಲು, ಪೊದರು ಪ್ರದೇಶ, ಚಿಗುರುತ್ತಿರುವ ಕಾಡು ಮತ್ತು  ಕೃಷಿಭೂಮಿಗಳಲ್ಲಿ ಕಂಡುಬರುತ್ತದೆ. ಬಯಲು, ಕರಾವಳಿ ಮತ್ತು ತಗ್ಗುಪ್ರದೇಶ ಇದರ ಸೂಕ್ತವಾದ ವಾಸಸ್ಥಾನ. ಇವುಗಳು ಇಲಿ ಹೆಗ್ಗಣಗಳನ್ನು ತಿನ್ನುವುದರಿಂದ ಮಾನವ ವಸತಿಯ ಹತ್ತಿರಕ್ಕೆ ಆಕರ್ಷಿಸಲ್ಪಡುತ್ತವೆ. ರಾತ್ರಿ ಸಮಯದಲ್ಲಿಇದು ಸಕ್ರಿಯವಾಗಿರುತ್ತದೆ. ಮರಿಹಾವುಗಳು ಹೆಚ್ಚು ಭೀತಿಗೊಳಗಾಗಿದ್ದು ಹೆಚ್ಚು ಆಕ್ರಮಣಕಾರಿಯಾಗಿವೆ.
ಈ ಹಾವುಗಳು ಬೆದರಿದಾಗ ದೇಹದ ಮೊದಲ ಮೂರನೇ ಒಂದು ಭಾಗವನ್ನುಎತ್ತರವಾಗಿ ಹಿಡಿದು ಇನ್ನುಳಿದ ಹಾವುಗಳಿಗಿಂತಲೂ ಜೋರಾಗಿ ಹಿಸ್ ಎಂದು ಬುಸುಗುಟ್ಟುತ್ತವೆ. ಆಮೇಲೆ ತನ್ನ ಇಡೀ ಶರೀರವನ್ನೇ ನೆಲದಿಂದ ಮೇಲಕ್ಕೆ ರಭಸದಿಂದ ಎತ್ತುತ್ತವೆ. ಒಮ್ಮೆ ಕ್ಷಿಪ್ರವಾಗಿ ಕಚ್ಚಿ ಅನೇಕ ಸೆಕೆಂಡುಗಳ ಕಾಲ ಕಡಿತವನ್ನು ಅದು ಹಿಡಿತದಲ್ಲಿಟ್ಟುಕೊಳ್ಳುತ್ತದೆ.
ಸಾ-ಸ್ಕೇಲ್ಡ್ ವೈಪರ್
ಈ ಹಾವಿನ ತಲೆಭಾಗವು ಕುತ್ತಿಗೆಗಿಂತ ವಿಶಿಷ್ಟವಾಗಿದ್ದು ಮೂತಿಯು ಗಿಡ್ಡ ಹಾಗೂ ದುಂಡಗಾಗಿರುತ್ತದೆ. ಈ ಹಾವು ವಿಷರಹಿತವಾದ ಹೆಬ್ಬಾವನ್ನು ಹೋಲುವುದರಿಂದ ಜನರು ಇದರ ಬಗ್ಗೆ ಜಾಗ್ರತೆ ವಹಿಸಬೇಕು.
ಈ ಹಾವುಗಳು ಪೇಲವ, ಕೆಂಪು, ಆಲಿವ್ ಅಥವಾ ತೆಳು ಕಂದು ಬಣ್ಣದಿಂದ ಕೂಡಿದ್ದು ಅದರ ಮೇಲೆ ಬೆನ್ನ ಮಧ್ಯ ಭಾಗದಲ್ಲಿ ಬೇರೆ ಬೇರೆ ಬಣ್ಣದ ಸಾಲು ಚುಕ್ಕಿಗಳಿರುತ್ತವೆ. ತಲೆಯ ಮೇಲ್ಭಾಗವು ಒಂದು  ಬಿಳಿಯ ಅಡ್ಡ ತ್ರಿಶೂಲ ಮಾದರಿಯನ್ನು ಹೊಂದಿದೆ. ಹೊಟ್ಟೆ ಭಾಗವು ನಸುಗೆಂಪು ಅಥವಾ ಬಿಳಿಯಾಗಿ ಕಂದು ಚುಕ್ಕಿಗಳಿಂದ ಕೂಡಿದ್ದು, ಎದ್ದು ಕಾಣುತ್ತವೆ.
ಕಾಳಿಂಗ ಸರ್ಪ
ಕಾಳಿಂಗ ಸರ್ಪ ವಿಶ್ವದ ಉದ್ದದ ವಿಷಪೂರಿತ ಹಾವು ಆಗಿದೆ. ಅದರ ಹೆಸರಿನಲ್ಲಿ ಪದ “ಕೋಬ್ರಾ” ಅಥವಾ ಸರ್ಪ ಎಂದಿದ್ದರೂ ಈ ಹಾವು ನಜ ನಜ ಪ್ರಬೇಧಕ್ಕೇ ಸೇರಿದುದಲ್ಲ. ಇವು ಹೆಚ್ಚಾಗಿ ಪಶ್ಚಿಮ ಘಟ್ಟ ಮತ್ತು ಅದರ ತಪ್ಪಲಲ್ಲಿ ವಾಸವಾಗಿರುತ್ತವೆ. ತಮ್ಮ ದೊಡ್ಡ ಗಾತ್ರದ ಹೊರತಾಗಿಯೂ, ಕಾಳಿಂಗ ಸರ್ಪವು ವೇಗವಾಗಿ ಮತ್ತು ಕ್ಷಿಪ್ರವಾಗಿ ಚಲಿಸುತ್ತದೆ.
ಈ ಹಾವಿನ ಚರ್ಮ ಆಲಿವ್ ಹಸಿರು, ಕಂದುಬಣ್ಣ, ಅಥವಾ ಕಪ್ಪು. ದೇಹದ ಅಡಿಭಾಗದಲ್ಲಿ ಮಸುಕಾದ ತಿಳಿ ಹಳದಿ ಅಡ್ಡ ಪಟ್ಟಿ ಇದೆ. ಹೊಟ್ಟೆ ಮಸುಕಾದ ಹಳದಿಬಣ್ಣದಿಂದ ಕೂಡಿದ್ದು ಮೃದುವಾಗಿರುವುದು. ಮರಿಗಳು ಕಪ್ಪು ಬಣ್ಣದಿಂದ ಕೂಡಿದ್ದು ಹೊಳೆಯುವ ಹಳದಿ ಪಟ್ಟಿಗಳಿವೆ. ಇದನ್ನು ಒಂದು ಬ್ಯಾಂಡೆಡ್ ಕಟ್ಟು ಹಾವೆಂದು ತಪ್ಪಾಗಿ ತಿಳಿದು ಕೊಳ್ಳಲು ಸಾಧ್ಯ. ಆದರೆ ಸುಲಭವಾಗಿ ತನ್ನ ವಿಸ್ತರಿಸಬಲ್ಲ ತನ್ನ ಹೆಡೆಯಿಂದ ಇದನ್ನು ಗುರುತಿಸಬಹುದು. ಕಾಳಿಂಗ ಹಾವುಗಳು ಸಾಕಷ್ಟು ಬೃಹತ್ ಗಾತ್ರದಲ್ಲಿದ್ದು, ತನ್ನ ಗಾತ್ರಕ್ಕಿಂತ ದೊಡ್ಡದಾದ ಬೇಟೆಯನ್ನು ನುಂಗಬಲ್ಲಷ್ಟು ತನ್ನ ದವಡೆಯನ್ನು ವಿಸ್ತರಿಸಿ ಬಾಯನ್ನು ತೆರೆಯಬಲ್ಲವುಗಳಾಗಿರುತ್ತವೆ. ಇದರ ಬಾಯಿಯ ಮುಂಭಾಗದಲ್ಲಿ ಎರಡು ಚಿಕ್ಕ, ಸ್ಥಿರ ವಿಷದ ಚೀಲ ಇರುವ ಹಲ್ಲುಗಳಿದ್ದು, ಪಿಚಕಾರಿಯಂತೆ ಬೇಟೆಯಲ್ಲಿ ವಿಷವನ್ನು ಎರಚಬಲ್ಲುದು. ಗಂಡು ಹಾವು ಹೆಣ್ಣುಹಾವಿಗಿಂತ ದೊಡ್ಡದಾಗಿದ್ದು ಹೆಚ್ಚು ದಪ್ಪವಾಗಿದೆ.
ಇದು ನೂರು ಮೀಟರ್ ದೂರದವರೆಗೆ ನೋಡಬಲ್ಲುದು. ಇದರ ಬುದ್ಧಿಶಕ್ತಿ ವಿಶೇಷವಾದುದು. ನೆಲದ ಮೂಲಕ ಬಂದತಹ ಕಂಪನಗಳಿಂದ ಅದರ ಆಹಾರದ ಪ್ರಾಣಿಗಳ ಚಲನೆಯನ್ನು ಗುರುತಿಸಬಲ್ಲುದು. ಕಾಳಿಂಗ ಸರ್ಪ ತನ್ನ ಸೀಳು ನಾಲಗೆಯಿಂದ ಬೇಟೆಯ ರಾಸಾಯನಿಕ  ಮಾಹಿತಿ ಪಡೆಯುತ್ತದೆ. ತದನಂತರ ಮಾಹಿತಿಯನ್ನು ಬಾಯಿಯ ಮೇಲ್ಭಾಗದಲ್ಲಿರುವ ವಿಶೇಷ ಸ್ಪರ್ಶ ಕೇಂದ್ರಕ್ಕೆ ರವಾನಿಸುತ್ತದೆ. ಈ  ವಾಸನೆ ಪತ್ತೆ ಮಾಡುವ ಪ್ರಕ್ರಿಯೆ ಮನುಷ್ಯನು ವಾಸನೆ ಪತ್ತೆ ಮಾಡುವ ಕ್ರಿಯೆಗೆ ಸಮನಾಗಿದೆ. ಕಾಳಿಂಗ ಸರ್ಪವು  ಒಮ್ಮೆ ಕಚ್ಚಿದರೆ ಆನೆಯನ್ನು ಕೂಡ ಕೊಲ್ಲಬಲ್ಲುದು. ಕಾಳಿಂಗ ಸರ್ಪದಿಂದ ತಪ್ಪಿಸಿಕೊಳ್ಳಲು ತನ್ನ  ಅಂಗಿ ಅಥವಾ ಟೊಪ್ಪಿಯನ್ನು ತೆಗೆದು ದೂರ ಎಸೆದರೆ ಅದು ತನ್ನ ಚಲನೆಯನ್ನು ಅದರೆಡೆಗೆ  ಬದಲಾಯಿಸುತ್ತದೆ.


ಭಾಗ ೨ – ಹಾವು ಕಡಿತದ ಸಾಧ್ಯತೆ  ಹಾಗೂ ಅದರ ತಡೆಗಟ್ಟುವಿಕೆ.

ಹಾವುಗಳು ಸಾಮಾನ್ಯವಾಗಿ ಮಾನವರನ್ನು ಬೇಟೆ ಮಾಡುವುದಿಲ್ಲ. ಏಕೆಂದರೆ ಹಾವುಗಳ ಬೇಟೆ ಮನುಷ್ಯನಲ್ಲ. ಆದರೆ ಬೆಚ್ಚಿಬಿದ್ದ, ಗಾಯಗೊಂಡ, ಕೆರಳಿದ ಹಾವುಗಳು ಅಥವ ಇಕ್ಕಟ್ಟಿನ ಪ್ರದೇಶದಲ್ಲಿ ಸಿಕ್ಕಿ ಬಿದ್ದ ಹಾವುಗಳು ರಕ್ಷಣೆಗೋಸ್ಕರ ಕಚ್ಚುವ ಸಾಧ್ಯತೆ ಹೆಚ್ಚು ಇರುತ್ತದೆ. ಹಾವುಗಳ ಆಹಾರವಾದ ಇಲಿಗಳು ಮತ್ತು ಹೆಗ್ಗಣಗಳು ಮನುಷ್ಯ ಸಂಪರ್ಕದಲ್ಲಿರುವುದರಿಂದ ಮನುಷ್ಯವಾಸ ಸ್ಥಳಗಳಲ್ಲಿ ಹಾವು ಕಡಿತ ಹೆಚ್ಚಾಗಿರುತ್ತದೆ.
ಸಣ್ಣ ವಿಷಕಾರಿಯಲ್ಲದ ಹಾವುಗಳಿಂದ ಮನುಷ್ಯನಿಗೆ ದೊಡ್ಡ ಬೆದರಿಕೆ ಇಲ್ಲ. ಇಂತಹ ಹಾವುಗಳ ದಂತ ಪಂಕ್ತಿಗೆ ತುಂಬ ಆಳವಾಗಿ ಕಚ್ಚಲು, ದೊಡ್ಡ ಮಟ್ಟಿನ ಗಾಯ ಮಾಡಲು ಅಸಾಧ್ಯವಾಗಿರುತ್ತದೆ. ಆದುದರಿಂದ ಇದರ ಕಡಿತವು ಸಾಮಾನ್ಯವಾಗಿರುತ್ತದೆ. ಆದರೆ ಕಡಿತದಿಂದಾಗಿ ಸೋಂಕು ಹಾಗೂ ಮಾಂಸಖಂಡಗಳ ತೊಂದರೆ ಆಗುತ್ತದೆ. ಈ ಹಾವುಗಳು ಬೇಟೆಯನ್ನು ಸುತ್ತುವರೆದು ಹಿಡಿದುಕೊಳ್ಳುತ್ತವೆ. ಆದುದರಿಂದ ಮಕ್ಕಳಿಗೆ ತೊಂದರೆ ಉಂಟು ಮಾಡಬಲ್ಲುದು. ಇವುಗಳಿಗಿಂತ ವಿಷಪೂರಿತ ಹಾವುಗಳು ಹೆಚ್ಚು ಅಪಾಯಕಾರಿ
ಹಾವು ಕಡಿತದ ಸಾಧ್ಯತೆಗಳು

ವಿಷಪೂರಿತ ಹಾವು ಕಡಿತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಆಗುತ್ತದೆ. ಇದು ಕಸುಬು ಆಧಾರಿತ ತೊಂದರೆಯಾಗಿದ್ದು, ಗದ್ದೆ ಬೇಸಾಯ ಮಾಡುವವರಿಗೆ ಕಡಿತದ ಸಾಧ್ಯತೆಗಳು ಹೆಚ್ಚಾಗಿವೆ. ಮುಂಗಾರು ಸಮಯದಲ್ಲಿ ಕೃಷಿ ಕಾಮಗಾರಿ ಮಾಡುತ್ತಿರುವಾಗ ಇವರ ಪಾದ, ಕಾಲು ಹಾಗೂ ಕೈಗಳು ಕಡಿತಕ್ಕೆ ಒಳಪಡುತ್ತವೆ. ಯಂತ್ರಗಳ ಮುಖಾಂತರ ಕೃಷಿ ಮಾಡುವವರಿಗೆ ಹಾವುಕಡಿತದ ಸಂದರ್ಭಗಳು ಕಡಿಮೆಯಾಗಿವೆ.
ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯದ ಜೀವನ ಶೈಲಿಯು ಹಾವುಕಡಿತದಿಂದ ಮರಣ ಹೊಂದಲು ಪೂರಕವಾಗಿರುತ್ತದೆ. ಬರಿಗಾಲಿನಲ್ಲಿ ನಡೆಯುವುದು, ಕತ್ತಲಲ್ಲಿ ಸಂಚಾರ, ಮಹಡಿಯಲ್ಲಿ ಮಲಗುವ ಅಭ್ಯಾಸ ಇವೆಲ್ಲ ಹಾವುಕಡಿತಕ್ಕೆ ಪೂರಕವಾಗಿರುತ್ತವೆ. ೨೦ರಿಂದ ೬೦ರ ನಡುವಿನ ವಯಸಿನ ರೈತರು, ಜಾನುವಾರುಗಳನ್ನು ಮೇಯಿಸುವವರು, ಶಾಲಾ ಮಕ್ಕಳು, ಬಡ ಗೃಹಿಣಿಯರು, ಮನೆ ಕಾಯುವವರು, ಕಾರ್ಮಿಕರು ಹಾವುಕಡಿತಕ್ಕೆ ಒಳಗಾಗುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಅಡುಗೆಗೆ ಮಣ್ಣಿನ ಬಳಕೆಯಿಂದ ಮಾಡಿದ ಕುಲುಮೆ, ಉರುವಲು ಅವಲಂಬಿತ ಒಲೆಗಳು ಇರುವ ಪ್ರದೇಶದಲ್ಲಿ ಹಾವು ಕಡಿತ ಹೆಚ್ಚಾಗಿರುತ್ತದೆ. ಅನೇಕ ಉರುವಲು ದಾಸ್ತಾನು ಇಡುವ ತಟ್ಟಿಗಳ ಮನೆಗಳು, ಜಾನುವಾರುಗಳ ವಾಸದ ಹಟ್ಟಿಗಳ ಬಳಿ ಮತ್ತು ಮಣ್ಣಿನಮನೆಗಳ ಬಳಿ ಹಾವುಕಡಿತದ ಸಾಧ್ಯತೆ ಹೆಚ್ಚಾಗಿರುತ್ತದೆ. ಏಕೆಂದರೆ ಇಲ್ಲಿ ಅವುಗಳ ಆಹಾರವಾದ ಇಲಿ ಹೆಗ್ಗಣಗಳ ವಾಸ ಜಾಸ್ತಿ. ಮಣ್ಣಿನ ಒಲೆಯಲ್ಲಿರುವ ಬೂದಿಯು ಬೇಸಿಗೆಯಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುವುದರಿಂದ ಇದು ಕಟ್ಟಿನ ಹಾವನ್ನು ಆಕರ್ಷಿಸುತ್ತದೆ.
ಮುಕ್ತ ಶೌಚಾಲಯ ಬಳಕೆಯಿಂದ ಜನನಾಂಗದಲ್ಲಿ ಹಾವುಕಡಿತ ಹೆಚ್ಚಾಗಿರುತ್ತದೆ. ನಾಗರಹಾವಿನ ಕಡಿತವು ಸಾಮಾನ್ಯವಾಗಿ ಬೆಳಗ್ಗಿನ ಜಾವ ಅಥವಾ ಸಾಂಯಕಾಲದ ಸಮಯದಲ್ಲಿ ಮವಿಸರ್ಜನೆ ಮಾಡಲು ಹೋದಾಗ ಸಂಭವಿಸುವುದು ಸಾಮಾನ್ಯ. ಕಲ್ಲುಗಳ ರಾಶಿ ಹಾಗೂ ಮನೆಯ ತಳ ಭಾಗದಲ್ಲಿ,  ಆಡುವಾಗ ಪೊದೆಯಲ್ಲಿ ಚೆಂಡನ್ನು ಹುಡುಕಲು ಹೋದಾಗ, ಶೌಚಾಲಯ ತೆರೆಯಲು ಹೋದಾಗ, ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ನಾಗರ ಹಾವಿನ ಕಡಿತ ಸಂಭವಿಸುವ ಸಾಧ್ಯತೆಗಳು ಹೆಚ್ಚು.
ಕಟ್ಟಿನ ಹಾವು ವಾತಾವರಣದ ಉಷ್ಣತೆ ಕಡಿಮೆ ಇರುವ ತಿಂಗಳುಳಾದ ಜೂನ್ ನಿಂದ ಡಿಸೆಂಬರ್ ವರೆಗೆ ಹೆಚ್ಚಾಗಿ ಬೆಚ್ಚಗಿರಲು ಹಾಸಿಗೆಯ ಒಳಗೆ ಸೇರುತ್ತವೆ. ಹೀಗೆ ಹಾಸಿಗೆಯಲ್ಲಿ ಮಲಗುವ ಸಂದರ್ಭದಲ್ಲಿ   ಕಡಿತದ ಸಂಭವ ಹೆಚ್ಚಾಗಿರುತ್ತದೆ. ಬ್ಯಾಂಡೆಡ್ ಕಟ್ಟಿನ ಹಾವು ರಾತ್ರಿಸಮಯದಲ್ಲಿ ಚುರುಕಾಗಿದ್ದರು ಕೂಡ ಇದು ಸಾಮಾನ್ಯ  ಕಟ್ಟಿನ ಹಾವುಗಳಷ್ಟು ಕಚ್ಚುವುದಿಲ್ಲ. ಮನೆಗಳನ್ನು ಕಟ್ಟುವಾಗ ಅದರ ಕಿಟಕಿಗಳನ್ನು ನೆಲ ಮಟ್ಟದಿಂದ ಐದು ಅಡಿಗಳಷ್ಟಾದರೂ ಎತ್ತರದಲ್ಲಿ ನಿರ್ಮಿಸುವುದರಿಂದ ಹಾವುಗಳು ಲಂಬವಾಗಿ ಕಟ್ಟಿನ ಹಾವು ಒಳಪ್ರವೇಶಿಸುವುದು ತಪ್ಪುತ್ತದೆ. ಹಾಗೂ ಕಿಟಕಿಗಳಿಗೆ ಸರಿಗೆಯ ಪರದೆಗಳನ್ನು ಅಳವಡಿಸುವುದರಿಂದಲೂ ಅವುಗಳ ಒಳ ಪ್ರವೇಶವನ್ನು ತಡೆಯಬಹುದು. ಮಂಚದ ಮೇಲೆ ಮಲಗುವುದರಿಂದ ಕೂಡ ಹಾವುಕಡಿತದ ಅಪಾಯವನ್ನು ಕಡಿಮೆಗೊಳಿಸಬಹುದು.
ಸಮುದ್ರದ ಹಾವುಗಳು ಸಮುದ್ರ ಕಿನಾರೆಯಲ್ಲಿ ಹೆಚ್ಚಾಗಿದ್ದು ಬೆಸ್ತರು ಆಕಸ್ಮಿಕ ವಾಗಿ ಹಾವು ಕಡಿತಕ್ಕೆ ಒಳಪಡುವರು.
ಮಂಡಲಹಾವು ಇಲಿಗಳನ್ನು ಅವಲಂಬಿಸಿರುವುದರಿಂದ ಅವುಗಳು ಸುಗ್ಗಿ ಸಮಯದಲ್ಲಿ ಬತ್ತ ಗೋಧಿ ಸಂರಕ್ಷಣೆಯ ಸ್ಥಳಗಳಲ್ಲಿ ಕಾಣಸಿಗುತ್ತವೆ. ಇವುಗಳ ಕಡಿತದಿಂದ ರೈತರು ದುರೃಷ್ಟಕರವಾಗಿ ಸಾಯುವುದು ಸಾಮಾನ್ಯ. ಭತ್ತ  ಹಾಗೂ ಜವಾರ್ ಕೊಯ್ಲಿನ ಸಮಯದಲ್ಲಿ ಮತ್ತು ಕಬ್ಬಿನ ಸಿಪ್ಪೆ ಕಟ್ಟುಗಳನ್ನು ನಿರ್ವಹಿಸುವವರಿಗೆ ಹಾವುಕಡಿತ ವಾಗಬಹುದು. ಬೆಳೆಯುವ ಹುಲ್ಲಿನ ಮೇಲೆ ನಡೆದುಕೊಂಡು ಹೋಗುವಾಗ  ಕೂಡ  ಅಪಾಯ ತಪ್ಪಿದ್ದಲ್ಲ.
ಹಾವು ಹಿಡಿಯುವವರು ಹಾವುಕಡಿತಕ್ಕೊಳಗಾಗಬಹುದು. ಹಾವು ಹಿಡಿಯುವವರ  ಅಸಮರ್ಪಕ ಅನುಭವ, ಅಜಾಗರೂಕತೆ, ತಂತ್ರ ಜ್ಞಾನದ ಕೊರತೆಯಿಂದ ಅವರಿಗೂ ಅಪಾಯ ತಪ್ಪಿದ್ದಲ್ಲ. ಹಾವುಗಳನ್ನು ತುಂಬಿಸಿಕೊಂಡ ಚೀಲ ತೆಳುವಾಗಿದ್ದರೆ ಹಾವುಗಳ ಚೂಪಾದ ಹಲ್ಲುಗಳ ಕಡಿತದಿಂದ ಕೂಡ ಹಾವು ಕಡಿತ ಸಂಭವಿಸಬಹುದು. ಹಾವು ಹಿಡಿಯಲು ಹೋಗುವವರು ಪೊಟರೆಗಳಿರುವ ಮರಗಳು, ಬಿರುಕುಗಳಿರುವ ಮರದ ತುಂಡುಗಳು, ದೊಡ್ಡ ಕಲ್ಲುಗಳ ಸಂಧಿಗಳು, ಸಣ್ಣ ಕಲ್ಲಿನ ರಾಶಿಗಳು, ಉರುವಲು, ಕಟ್ಟಿಗೆಯ ಅಟ್ಟಣಿಗೆ, ಹಳೆಯ ಗುಡಿಸಲುಗಳು, ಕತ್ತಲು ಆವರಿಸಿರುವ ಮರದ ಅಟ್ಟಗಳು ಇವುಗಳ ಬಗ್ಗೆ ಜಾಗರೂಕರಾಗಿರಬೇಕು.
ಕೆಲವೊಂದು ಹಾವುಗಳು ತಮ್ಮ ರಕ್ಷಣೆಗೋಸ್ಕರ ಸತ್ತಂತೆ ನಿಶ್ಚಲವಾಗಿರುವುದು ಅಥವಾ ಬೆನ್ನು ಅಡಿಗೆ ಹಾಕಿ ಮಲಗಿಕೊಳ್ಳುವುದು ನಾಲಗೆ ಹೊರ ಚಾಚಿರುವುದೂ ಕಂಡು ಬರುತ್ತವೆ. ಹತ್ತಿರ ಹೋದರೆ ಇವುಗಳಿಂದ ಕಡಿತಕ್ಕೊಳಗಾಗುವ ಸಂಭವ ಹೆಚ್ಚು.
ಕನ್ನಡಿ ಹಾವಿನಿಂದ ರೈತರು, ಬೇಟೆಗಾರರು, ಕೂಲಿಗಾರರು, ಅಲೆಮಾರಿ ವ್ಯಾಪಾರಿಗಳು,  ಕಲ್ಲು ಪ್ರದೇಶಗಳಲ್ಲಿ ಮತ್ತು ಕಾಡಿನಲ್ಲಿ ಬರಿಗಾಲಿನಲ್ಲಿ ನಡೆಯುವವರಿಗೆ ಅಪಾಯ ತಪ್ಪಿದ್ದಲ್ಲ. ಮೊಣಕಾಲಿನವರೆಗಿನ ಪ್ರತಿಬಂಧಕ ಚಪ್ಪಲಿಗಳನ್ನು ಧರಿಸುವುದು ಮತ್ತು ಅಪಾಯಕರ ಹಾವುಗಳ ಆವಾಸಸ್ಥಾನವಾಗಿರುವ ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಪ್ರತಿ ವರ್ಷ ಸಾವಿರಾರು ಜನರು ಹಾವಿನ ಕಡಿತದಿಂದಾಗಿ ಸಾವನ್ನಪ್ಪುತ್ತಾರೆ. ಅನೇಕ ಪ್ರದೇಶಗಳಲ್ಲಿ ಹಾವಿನ ಕಡಿತಗಳನ್ನು ವರದಿ ಮಾಡುವುದು ಕಡ್ಡಾಯವಾಗಿಲ್ಲದಿರುವುದರಿಂದ ಹಾವು ಕಡಿತದ ಅಂಕಿ ಅಂಶಗಳು ನಿಖರವಾಗಿ ಸಿಗುವುದಿಲ್ಲ. ಸಮುದಾಯದವರು ಮತ್ತು ಆರೋಗ್ಯ ಇಲಾಖೆ ಅತ್ಯಾವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಹಾವು ಕಡಿತದಿಂದಾಗುವ ಅಪಾಯವನ್ನು ಕಡಿಮೆಗೊಳಿಸಬಹುದು.

ಭಾಗ ೩ – ಹಾವುಕಡಿತದ ಚಿಹ್ನೆ ಮತ್ತು ಲಕ್ಷಣಗಳು
ನಾಗರ ಹಾವು – ಕಡಿತದ ಚಿಹ್ನೆ ಮತ್ತು ಲಕ್ಷಣಗಳು.
ನಾಗರಹಾವಿನ ಮೂಲಕ ದೇಹಕ್ಕೆ ಸೇರಿಸಲ್ಪಡುವ  ವಿಷದ ಅತ್ಯಧಿಕ ಪ್ರಮಾಣದಲ್ಲಿ ೨೧೧ ಮಿಗ್ರಾಂ.  ಕೇವಲ ೧೬ ಮಿಗ್ರಾಂ ವಿಷ ವಯಸ್ಕ ಮಾನವನ ಕೊಲ್ಲಲು ಸಾಕಾಗುತ್ತದೆ.
ಭಾರತೀಯ ನಾಗರಹಾವಿನ ಕಡಿತದಲ್ಲಿ ಸ್ಥಳೀಯ ಅಂಗಾಂಶ ಹಾನಿಯಾಗುವ ಸಂಭವ ಹಾಗೂ ತೀವ್ರತೆ ಕಡಿಮೆ. ಹಾವು ಕಚ್ಚಿದ ಸ್ಥಳವನ್ನು ಕಚ್ಚಿ ಹಿಡಿದು ಜಗಿದು ತನ್ನಲ್ಲಿಯ ೬೦% ವಿಷವನ್ನು ಸ್ರವಿಸುತ್ತದೆ. ಕಡಿತದ ಸ್ಥಳದಲ್ಲಿ ವಿಸ್ತಾರವಾಗಿಯೂ ಹಾಗೂ ಸ್ಥಳೀಯವಾಗಿಯೂ ನಿರ್ಜೀವತೆ ಮತ್ತು ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಕಚ್ಚಿದ ಸ್ಥಳದ ಊತ ಸಾಮಾನ್ಯವಾಗಿರುವುದಿಲ್ಲ. ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಷದ ಹಲ್ಲುಗಳ ಕಚ್ಚಿದ ಆಳವಾದ ಗುರುತುಗಳು ಕಂಡು ಬರಬಹುದು. ಕಣ್ಣಿಗೆ ಕಾಣುವ ಸಣ್ಣ ಸೀಳುವಿಕೆ ಅಥವಾ ಪರಚಿದ ಗಾಯಗಳು ಅಥವಾ ಗಮನಾರ್ಹವಲ್ಲದ  ಅಸ್ಪಷ್ಟಗಾಯದ ಗುರುತುಗಳೂ ಇರಬಹುದು. ಹಲ್ಲುಗಳ ಕಡಿತದ ಗುರುತುಗಳು ಇಲ್ಲದಿದ್ದಲ್ಲಿ ಹಾವು ಕಡಿತವಾಗಲಿಲ್ಲ ಎಂದು ಹೇಳುವುದು ಅಸಾಧ್ಯ.
ನರಮಂಡಲ ಮತ್ತು ನರಸ್ನಾಯು : ಹಾವು ಕಡಿತದಿಂದ ವಿಷದ ಪ್ರಭಾವ ಮುಖ್ಯವಾಗಿ ನರಮಂಡಲ ಮತ್ತು ನರಸ್ನಾಯುಗಳ ಮೇಲೆ ಆರಂಭಿಕವಾಗಿ ಬೀರಲ್ಪಡುತ್ತದೆ. ವಿಷದ ಪ್ರಮಾಣದ ಮೇಲೆ ಹೊಂದಿಕೊಂಡು ಆಂಶಿಕವಾಗಿ ಅಥವಾ ಪೂರ್ಣವಾಗಿ ರೋಗಲಕ್ಷಣಗಳು ಕಂಡು ಬರುತ್ತವೆ. ಅನೇಕ ಸಾವಿನಿಂದ ಬದುಕುಳಿದವರಿಗೆ ಕೂಡ ಶಾಶ್ವತ ಅಂಗಾಂಶಗಳ ಹಾನಿ, ಶಾಶ್ವತ ಅಂಗವಿಕಲತೆ ಕಂಡು ಬಂದಿದೆ. ಹಾವು ಕಡಿತದಿಂದಾಗಿ ವಿಷವೇರಿದ್ದರೆ ಸಾಮಾನ್ಯವಾಗಿ ಈ ರೋಗ ಲಕ್ಷಣಗಳು ಒಂದರಿಂದ ನಾಲ್ಕು ಗಂಟೆಗಳ ಒಳಗೆ ಕಂಡು ಬರುತ್ತವೆ.
ವಾಕರಿಕೆ ಮತ್ತು ವಾಂತಿ
ತೀರಾ ಕಡಿಮೆ ರಕ್ತದೊತ್ತಡ
ಮುಖದಲ್ಲಿ ಬೆವರುವಿಕೆ
ಮೈ ಬೆಚ್ಚಗಾಗುವುದು
ಕಡಿತದ ಸ್ಥಳದಲ್ಲಿ ನೋವು
ಹೊಟ್ಟೆ ನೋವು
ಜಡತ್ವ
ಮೇಲಿನ ಕಣ್ಣುರೆಪ್ಪೆ ಜೋತುಬೀಳುವುದು
ಶ್ವಾಸೋಚ್ಛ್ವಾಸ ಸ್ಥಗಿತ  ಅಥವಾ ಕಟ್ಟುಸಿರು
ಕಣ್ಣಿನ ಸ್ನಾಯುಗಳ ಬಲಹೀನತೆ
ಬಾಯಿಯ ತಾಲವ್ಯದ ಭಾಗದ ಬಲಹೀನತೆ
ಗಂಟಲು ಹಾಗೂ ನಾಲಗೆಯ ಸ್ನಾಯುಗಳ ಬಲಹೀನತೆ
ಅಂಗಗಳಲ್ಲಿ ಬಲಹೀನತೆ
ಮೈಯಲ್ಲಿ ನಡುಕ
ಕುತ್ತಿಗೆಯ ಸ್ನಾಯುಗಳ ಬಲಹೀನತೆಯಿಂದ ತಲೆ ಇಳಿಬೀಳುವಿಕೆ
ತಲೆನೋವು
ಪ್ರಜ್ಞೆ ತಪ್ಪುವುದು
ಅಡೆತಡೆಯ ನಡಿಗೆ
ಹೃದಯದ ಸ್ನಾಯುಗಳಲ್ಲಿ ಜಡತ್ವ ಮತ್ತು ಹೃದಯದ ಸಂಕುಚಿತಗೊಳ್ಳುವ ಕ್ರಿಯೆಯಲ್ಲಿ ಸ್ಥಗಿತ ಕಂಡು ಬಂದಲ್ಲಿ ಸಾವು ಸಂಭವಿಸುವುದು.

ಕನ್ನಡಿ ಹಾವು – ಕಡಿತದ ಚಿಹ್ನೆ ಮತ್ತು ಲಕ್ಷಣಗಳು.

ರಸೆಲ್ ವೈಪರ್, ಸಾ ಸ್ಕೇಲ್ಡ್ ವೈಪರ್,  ಪಿಟ್ ವೈಪರ್ ಗಳು ಕನಡಿ ಹಾವುಗಳ ಪಂಗಡಕ್ಕೆ ಸೇರಿದ ಹಾವುಗಳಾಗಿದ್ದಾವೆ. ಇವುಗಳ ವಿಷದಲ್ಲಿ ಪ್ರೋಟೀನ್ ಗಳನ್ನು ಕರಗಿಸುವ ಕಿಣ್ವಗಳಿದ್ದು ಇವು ಕಚ್ಚಿದ ಸ್ಥಳದಲ್ಲಿ ಅತಿಯಾದ ನೋವು ಬಲವಾದ  ಊತ, ಕಚ್ಚಿದ ಸ್ಥಳ ನಿರ್ಜೀವಗೊಳ್ಳುವುದು, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವುದು ಮುಖಾಂತರ ರಕ್ತ ಸ್ರಾವ ಮೊದಲಾದುವು ಕಂಡು ಬರುತ್ತವೆ. ಇವುಗಳ ಕಡಿತದ ಸ್ಥಳದಲ್ಲಿ ಅತಿಯಾದ ನೋವನ್ನು ನಿರ್ಲಕ್ಷಿಸುವ ಹಾಗಿಲ್ಲ. ಇದರಿಂದ ಸಾವನ್ನಪ್ಪುವ ಸಾಧ್ಯತೆಗಳೂ ಇದ್ದಾವೆ. ಕಚ್ಚಿದ ಸ್ಥಳ ದಲ್ಲಿ ಶಾಶ್ವತವಾದಂತಹ ಕಲೆ ಉಳಿಯಬಹುದು. ಕೆಲವೊಮ್ಮೆ ಕಚ್ಚಿದ ಭಾಗವನ್ನು ಉಳಿಸಲಿಕ್ಕಾಗದೆ ಕತ್ತರಿಸುವ ಸಂದರ್ಭಗಳೂ ಬರಬಹುದು. ಕಡಿಮೆ ರಕ್ತದೊತ್ತಡದಿಂದ ಹೃದಯದ ಮೇಲೆ ಪರಿಣಾಮ ಬಿದ್ದು ಸಾವು ಸಂಭವಿಸುತ್ತದೆ. ಇದಲ್ಲದೆ ಬದುಕುಳಿದವರಲ್ಲಿ ಧೀರ್ಘಾವಧಿ ಮೂತ್ರಪಿಂಡಗಳ ವೈಫಲ್ಯ ಆಗಬಹುದು. ಇದು ಹಾವಿನ ಗಾತ್ರ ಮತ್ತು ಸ್ರವಿಸಲ್ಪಟ್ಟ ವಿಷ ಹಾಗೂ ಚಿಕಿತ್ಸೆ ಪಡೆಯಲು ತೆಗೆದುಕೊಂಡ ಸಮಯದ ಮೇಲೆ ಹೊಂದಿಕೊಂಡಿದೆ.

ಕಟ್ಟು ಹಾವು (ಕ್ರೇಟ್ )- ಕಡಿತದ ಚಿಹ್ನೆ ಮತ್ತು ಲಕ್ಷಣಗಳು

ಕಟ್ಟಿನ ಹಾವಿನ ವಿಷವು ನರ ಮಂಡಲದ ಮೇಲೆ ಪ್ರಭಾವ ಬೀರುವಂತಹುದ್ದಾಗಿರುವುದರಿಂದ ಪಾರ್ಶ್ವ ವಾಯು ಕೂಡ ಆಗಬಹುದು. ಕಚ್ಚಿದ ಸ್ಥಳದ ಮಾಂಸಖಂಡಗಳು ನಿಶ್ಚಲ ಗೊಳ್ಳುವವು. ಅತಿಯಾದ ಹೊಟ್ಟೆನೋವು ಕೂಡ ಕಂಡುಬಂದು ರಕ್ತವಾಂತಿ ಸಂಭವಿಸಬಹುದು. ಕಣ್ಣಿನ ರೆಪ್ಪೆಯಲ್ಲಿ ಬಲಹೀನತೆ ಕಂಡು ಬರಬಹುದು. ಇಲ್ಲಿ ಉಸಿರಾಟದ ತೊಂದರೆಯಿಂದಾಗಿ ಕೂಡ ಉಸಿರುಕಟ್ಟಿ ಸಾವು ಸಂಭವಿಸುತ್ತದೆ. ತಕ್ಷಣ ಔಷಧೋಪಚಾರ, ಆಸ್ಪತ್ರೆಯಲ್ಲಿ ಲಭ್ಯವಿರುವ ಉಪಕರಣಗಳಿಂದ ಕೃತಕ ಉಸಿರಾಟವನ್ನು ಪ್ರಾರಂಭಿಸುವ ಸಂದರ್ಭ ಬರಬಹುದು. ಮಳೆಗಾಲದಲ್ಲಿ ಹಾವು ರಾತ್ರೆ ಮನೆಯೊಳಗೆ ಸೇರುವುದು ಸಾಮಾನ್ಯವಾಗಿದ್ದು ಇಂತಹ ಹಾವುಕಡಿತಗಳು ನೋವಿಲ್ಲದ ಕಾರಣ ನಿದ್ರಾವಸ್ಥೆಯಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಈ ಹಾವುಕಡಿತದಿಂದ ಆರರಿಂದ ಎಂಟು ಗಂಟೆಗಳ ನಂತರ ಸಾವು ಸಂಭವಿಸಬಹುದು.

ಕಾಳಿಂಗ ಸರ್ಪ – ಕಡಿತದ ಚಿಹ್ನೆ ಮತ್ತು ಲಕ್ಷಣಗಳು

ಇದರ ವಿಷವು ನರಮಂಡಲ ಹಾಗೂ ಹೃದಯದ ಮೇಲೆ ಪ್ರಭಾವ ಬೀರುವಂತಹುದಾಗಿದೆ. ಹಾವು ಕಡಿಯುವಾಗ ಅದರ ಹಲ್ಲು ಗಳು ಒಂದೂವರೆ ಸೆ ಮೀ ರಷ್ಟು ಒಳಹೊಕ್ಕುತ್ತವೆ. ಮತ್ತು ಅಲ್ಲಿ ವಿಷ ಸ್ರವಿಸಲ್ಪಡುತ್ತದೆ. ನರಮಂಡಲದ ಮೇಲೆ ಪ್ರಥಮವಾಗಿ ಪ್ರಭಾವ ಬೀರುವುದರಿಂದ ಅತಿಯಾದ ನೋವು, ದೃಷ್ಟಿಮಂದ, ತಲೆತಿರುಗುವಿಕೆ, ಅರೆನಿದ್ರಾವಸ್ಥೆ ಮತ್ತು ಪಾರ್ಶ್ವವಾಯು ಮುಂತಾದ ಲಕ್ಷಣಗಳು ಕಾಣಬಹುದು. ಮುಂದೆ ಹೃದಯದ ಮೇಲೆ ಪ್ರಭಾವ ಬೀರಿ ಹೃದಯಕ್ರಿಯೆಯಲ್ಲಿ ವೈಫಲ್ಯ ಬಂದು ತದನಂತರ ಮೂರ್ಛಾವಸ್ಥೆ ಹೋಗಬಹುದು. ಉಸಿರಾಟದ ತೊಂದರೆಯಿಂದಾಗಿ ಸಾವು ಸಂಭವಿಸುವುದು ಸಾಧ್ಯ. ಮೂತ್ರಪಿಂಡದ ವೈಫಲ್ಯದಿಂದಲೂ ಕೂಡ ಸಾವು ಆಗಬಹುದು. ಸಾವು ಮೂವತ್ತು ನಿಮಿಷಗಳಲ್ಲೂ ಸಂಭವಿಸಬಹುದು.

ಭಾಗ ೪ – ಚಿಕಿತ್ಸೆ

ಹಾವುಕಡಿತಕ್ಕೆ ಎರಡು ತರಹದ ಪ್ರತಿವಿಷಗಳು ಲಭ್ಯವಿದ್ದಾವೆ. ಪ್ರತಿವಿಷವನ್ನು ಕೊಡಬೇಕಾದ ಪ್ರಮಾಣವು ಹಾವಿನ ಮೇಲೆ ಹಾಗೂ ಸ್ರವಿಸಲ್ಪಟ್ಟ  ವಿಷದ ಮೇಲೆ ಹೊಂದಿಕೊಂಡಿದೆ. ಪ್ರತಿವಿಷವು ೨೬ರಿಂದ ೯೬ ಗಂಟೆಗಳಷ್ಟು ಸಮಯ ಪರಿಣಾಮಕಾರಿಯಾಗಿರುವುದು.

ಹಾವು ಕಡಿತವಾದಾಗ ಪ್ರಥಮ ಚಿಕಿತ್ಸೆ – ಏನು ಮಾಡಬೇಕು?

ಹಾವು ಕಡಿತವಾದಾಗ ರೋಗಿಯ ಬಳಿ ಇರುವ ಹತ್ತಿರದ ಸಂಬಂಧಿಗಳು, ಆತ್ಮೀಯ ಸ್ನೇಹಿತರು ಮತ್ತು ಸಾಮಾಜಿಕ ಕಾರ್ಯಕರ್ತರು ಹೆಚ್ಚಾಗಿ ತಕ್ಷಣ ಕಾರ್ಯಪ್ರವರ್ತರಾಗಿ ಪ್ರಥಮಚಿಕಿತ್ಸೆ ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಎಲ್ಲರೂ ಮುಖ್ಯವಾದ ಕೆಲವು ವಿಚಾರಗಳನ್ನು ಗಮನದಲ್ಲಿರಿಸಿದರೆ  ಹಾವು ಕಡಿತಗೊಳಗಾದವರ ಪ್ರಥಮ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನಡೆಸಬಹುದು.
ಹಾವಿನಿಂದ ದೂರ ಸರಿಯುವುದು.
ಮೊತ್ತ ಮೊದಲು ಕಡಿತಗೊಳಗಾದವನನ್ನು ಮತ್ತು ಇತರರನ್ನು ಹಾವಿನಿಂದ ದೂರಕ್ಕೆ ಸರಿಸಬೇಕು. ಅದು ಮಗದೊಮ್ಮೆ ಯಾರನ್ನೂ ಕಚ್ಚದಂತೆ ಮಾಡುವುದು ಮುಖ್ಯ. ಏಕೆಂದರೆ ಕೆರಳಿದ ಅಥವ ಗಾಯಗೊಂಡ ಹಾವು ತನ್ನ ಆತ್ಮರಕ್ಷಣೆಗೆ ಯದ್ವಾತದ್ವಾ ಹರಿದಾಡಿ ಅವನನ್ನೆ ಅಥವಾ ಇತರರನ್ನು ಕಚ್ಚುವ ಸಾಧ್ಯತೆಗಳೂ ಇವೆ.
ಧೈರ್ಯ ತುಂಬುವುದು
ಹಾವು ಕಡಿತಕ್ಕೊಳಗಾದವನು ಭಯದಿಂದ ಆತಂಕಗೊಳಗಾಗುವುದು ಸಹಜ. ಅವನು ಆತಂಕಗೊಂಡರೆ ಅವನು ಚಿಕಿತ್ಸೆಗೆ ಸಹಕರಿಸಲು ನಿಧಾನಿಸಬಹುದು ಅಥವಾ ಸಹಕರಿಸದೆಯೂ ಇರಬಹುದು. ಆತಂಕಗೊಂಡಾಗ  ಹೃದಯಬಡಿತ ಕ್ರಿಯೆ ಹೆಚ್ಚಾಗುವುದರಿಂದ ವಿಷಕಾರಿ ಹಾವುಗಳಿಂದ ಕಡಿತಕ್ಕೊಳಗಾದವನ ಶರೀರದಲ್ಲಿ ತ್ವರಿತಗತಿಯಲ್ಲಿ ವಿಷ ಹೀರಿ ದುಷ್ಪರಿಣಾಮಗಳು ಹೆಚ್ಚಾಗುತ್ತವೆ. ಆದುದರಿಂದ ಕಡಿತಕ್ಕೊಳಗಾದವನಲ್ಲಿ ಧೈರ್ಯ ತುಂಬಬೇಕು. ಹಾವು ಕಡಿತಕ್ಕೆ ಒಳಗಾದ ಸಂದರ್ಭದಲ್ಲಿ ಕಡಿತಗೊಂಡವನ ಜೊತೆಗೆ ಇರುವವರು  ಮುಖ್ಯವಾಗಿ ಆತಂಕಕ್ಕೊಳಗಾಗಬಾರದು.
ಹೆಚ್ಚಿನ ಹಾವುಕಡಿತಗಳು ವಿಷವಲ್ಲದ ಹಾವುಗಳಿಂದ ಆಗುತ್ತವೆ. ವಿಷಪೂರಿತ ಹಾವುಗಳಿಂದ ಕಡಿತವಾದಗಿದ್ದಲ್ಲಿ ಕೂಡ ಅನೇಕ ಬಾರಿ ಅವುಗಳಿಂದ ವಿಷ ಸ್ರವಿಸಿರುವುದಿಲ್ಲ. ಸ್ರವಿಸಿದರೂ ಕೂಡ ಅದು ಅನಾಹುತಕ್ಕೆ ಬೇಕಾದಷ್ಟು ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಆತಂಕಗೊಳ್ಳುವುದರಿಂದ ಅನಾವಶ್ಯಕ ಕಾಲಹರಣವಾಗುವುದೇ  ಹೊರತು ಚಿಕಿತ್ಸೆಗೆ ಅನುವು ಮಾಡಿಕೊಟ್ಟಂತಾಗುವುದಿಲ್ಲ. ಹೇಗಿದ್ದರೂ  ಚಿಕಿತ್ಸೆಗೆ ಸಾಮೂಹಿಕ ಪ್ರಯತ್ನ ಮಾಡುವಲ್ಲಿ ಆತಂಕದಿಂದ ತೊಂದರೆಯೇ ಹೆಚ್ಚು. ಹಾವು ಕಡಿತಕ್ಕೆ ವೈಜ್ಞಾನಿಕ ವೈದ್ಯಕೀಯ ವಿಧಾನದ ಹೊರತು ಬೇರೆ ಯಾವುದೇ ವಿಧಾನಗಳು ಫಲಕಾರಿಯಲ್ಲ. ಆದುದರಿಂದ ಯಾರೂ ಆತಂಕಕ್ಕೊಳಗಾಗದೆ  ಚಿಕಿತ್ಸೆಯು ವೈಜ್ಞಾನಿಕತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು.
ಕಡಿತಗೊಳಗಾದ ಭಾಗವನ್ನು ಅಲುಗಾಡದಂತೆ ತಡೆಯುವುದು
ಕಡಿತಕ್ಕೊಳಗಾದವನನ್ನು ಅಂಗಾತ ಮಲಗಿಸಿ ಕಡಿತಕ್ಕೊಳಗಾದ ಭಾಗವು ಹೃದಯ ಮಟ್ಟದಿಂದ ಕೆಳಗೆ ಇರುವಂತೆ ಮಾಡಬೇಕು. ಆತನು ಧರಿಸಿರುವ ಪಾದರಕ್ಷೆ,  ಉಂಗುರ,  ಒಡವೆಗಳು,  ಧರಿಸಿದ ಬಟ್ಟೆ ಕೂಡ ಊತಕ್ಕೊಳಗಾದಾಗ ಬಿಗಿಯಾಗಬಲ್ಲುದು. ಆದುದರಿಂದ ಅವನ್ನು ತಕ್ಷಣ ಕಳಚಬೇಕು. ಕಡಿತಕ್ಕೊಳಗಾದ ಭಾಗವನ್ನು ಚಲಿಸದಂತೆ ಮಾಡಲು ಎಲುಬು ಮುರಿತಕ್ಕೆ ಸ್ಪ್ಲಿಂಟ್ ಅಳವಡಿಸುವ ಹಾಗೆಯೇ  ಇಲ್ಲಿ ಕೂಡ ಅದಕ್ಕೆ ಪಟ್ಟಿಯನ್ನು ಇಟ್ಟು ಸಡಿಲವಾಗಿ ಸುತ್ತಬೇಕು. ಮೊದಲು ಬ್ಯಾಂಡೇಜ್ ಅಥವಾ ಬಟ್ಟೆಯನ್ನು ಹದ ಬಿಗಿಯಾಗಿ ಸುತ್ತಿ ಅದರಮೇಲೆ ಪಟ್ಟಿಯನ್ನು ಇಟ್ಟು ಅದರ ಮೇಲೆ ಬಟ್ಟೆಯನ್ನು ಸುತ್ತಬೇಕು. ಬಿಗಿಯಾಗಿ  ಗಂಟುಗಳನ್ನು ಕಟ್ಟಬಾರದು. ಇದರಿಂದ ಆನಾಹುತಗಳು ಹೆಚ್ಚಾಗಬಹುದು. ಹಾಗೆಯೇ ಆ ಸ್ಥಿತಿಯಲ್ಲೇ ಆಸ್ಪತ್ರೆಗೆ ಕರಕೊಂಡು ಹೋಗಬೇಕು.
ತಕ್ಷಣ ಆಸ್ಪತ್ರೆ ಗೆ ಸಾಗಿಸುವುದು.
ಧೈರ್ಯ ತುಂಬುವ ಹಾಗೂ ಸ್ಪ್ಲಿಂಟ್ ಅನ್ನು ಅಳವಡಿಸುವ ಸಮಯದಲ್ಲಿ ಹತ್ತಿರದ ಆಸ್ಪತ್ರೆಗೆ ನಡೆದ ಘಟನೆ ಹಾಗೂ ಕಡಿತಕ್ಕೊಳಗಾದವನ ಸ್ಥಿತಿಯ ಬಗ್ಗೆ ತಿಳಿಸುವುದು ಅತೀ ಅವಶ್ಯಕ. ಇದು ಕೂಡಾ  ಪ್ರಥಮ ಚಿಕಿತ್ಸೆಯ ಮುಖ್ಯ ಭಾಗವಾಗಿರುತ್ತದೆ. ಇದರಿಂದ ಆಸ್ಪತ್ರೆಯಲ್ಲಿರುವ ವೈದ್ಯಕೀಯ ತಂಡವು ರೋಗಿಯನ್ನು ಸ್ವೀಕರಿಸಿ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಲು ತಯಾರಿ ನಡೆಸಲು ಸಾಧ್ಯವಾಗುತ್ತದೆ.
ವಿಷ ಪ್ರತಿರೋಧಿ ಔಷಧ ( ಆ್ಯಂಟಿವೀನಂ) ಬಳಸುವುದು ಖಚಿತ ಹಾಗೂ ಧೃಡೀಕರಿಸಲ್ಪಟ್ಟ  ವೈಜ್ಞಾನಿಕ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆ ಪ್ರಾರಂಭಿಸಿದರೆ ಮಾತ್ರ ಅದು ನಿರೀಕ್ಷೆಯಂತೆ ಕಾರ್ಯವೆಸಗಬಹುದು. ಆದುದರಿಂದ ಆತನನ್ನು ತಕ್ಷಣ ಆ್ಯಂಟಿವೀನಂ ದಾಸ್ತಾನು ಇರುವ ಆಸ್ಪತ್ರೆಗೆ  ಸಾಗಿಸಬೇಕು. ಇದರಿಂದ ಮಾರಣಾಂತಿಕ ಘಟನೆಗಳನ್ನು ತಪ್ಪಿಸಬಹುದು.   
ಕೂಡಲೇ ೧೦೮ ತುರ್ತು ಚಿಕಿತ್ಸಾ ವಾಹನದ ಸೇವೆಯನ್ನು ಪಡೆಯುವ ಪ್ರಯತ್ನವನ್ನೂ ಮಾಡಬೇಕು
ಕಚ್ಚಿದ ಹಾವನ್ನು ಕೊಂದಿದ್ದರೆ ಅದನ್ನು ಒಯ್ಯುವಾಗ ಜಾಗ್ರತೆಯಾಗಿರುವುದು.
ವೈದ್ಯರಿಗೆ ಹಾವನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಕೆಲವರು ಕಚ್ಚಿದ್ದ ಹಾವನ್ನು ಕೊಂದು  ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಆದರೆ ಈ ಪ್ರಯತ್ನ ದಲ್ಲಿ ಇತರರು ಕೂಡ ಹಾವು ಕಡಿತಕ್ಕೊಳಗಾಗಬಹುದು ಎಂಬುದನ್ನು ಗಮನಿಸಬೇಕು. ಕೊಲ್ಲಲ್ಪಟ್ಟ ಹಾವು ವಿಷದ ಹಾವಾಗಿದ್ದರೆ ಬೆನ್ನುಹುರಿಯ ಪ್ರತಿಫಲನಾಕ್ರಿಯೆಯಿಂದಾಗಿ  (spinal reflex) ಮತ್ತೂ ಒಂದು ಘಂಟೆಕಾಲ ಸತ್ತಹಾವು ಕಚ್ಚಿ ವಿಷವನ್ನು ಸ್ರವಿಸಬಲ್ಲುದು. ಆದುದರಿಂದ  ಸತ್ತ ಹಾವನ್ನು ಒಯ್ಯುವಾಗ ಜಾಗರೂಕತೆಯಿಂದ ಇರಬೇಕು.
ಹೃದಯ ಹಾಗೂ ಶ್ವಾಸೋಛ್ವಾಸ ಕ್ರಿಯೆ ಪುನರಾರಂಭಿಸಲು ಎಲ್ಲ ರೀತಿಯಲ್ಲಿ ತಯಾರಾಗಿರುವುದು.
ಕಡಿತಕ್ಕೊಳಗಾದವನಲ್ಲಿ  ಪ್ರಜ್ಞೆ ತಪ್ಪುವುದು, ಪ್ರಜ್ಞೆಮಂದವಾಗುವುದು, ಉಸಿರಾಟದಲ್ಲಿ ತೊಂದರೆ ಅನುಭವಿಸುವುದು ಹಾಗೂ ಹೃದಯ ಸ್ತಂಭನವಾಗುವ ಸಾಧ್ಯತೆಗಳಿವೆ.   ಇದರ ಜತೆ ಸ್ನಾಯುಗಳಲ್ಲಿ ಬಲಹೀನತೆ ಕಣ್ಣಿನ ಮೇಲ್ ರೆಪ್ಪೆ ಬಲಹೀನವಾಗಿ ಮುಚ್ಚಲ್ಪಡುವುದು (ptosis) ಹೊಟ್ಟೆಯಲ್ಲಿ ತೀವ್ರಥರದ ನೋವು ಕಾಣಿಸುವುದು ಇವೆಲ್ಲ ಕೆಲವು ಆಘಾತಕರ ಲಕ್ಷಣಗಳಾಗಿವೆ.
ಹೆಪ್ಪುಗಟ್ಟಿದ ರಕ್ತ   ಅಥವಾ ಇತರ ದ್ರವ್ಯಗಳ ಸ್ರವಿಸುವಿಕೆಯಿಂದಾಗಿ ಶ್ವಾಸನಾಳದಲ್ಲಿ ತಡೆ ಇದೆಯೇ ಎಂಬುದನ್ನು ಪರಿಶೀಲಿಸಿಬೇಕು. ಇದ್ದಲ್ಲಿ ಸಾಧ್ಯವಾದಷ್ಟು  ಅದನ್ನು ತೆಗೆದು ಸ್ವಚ್ಚಗೊಳಿಸಬೇಕು. ಉಸಿರಾಟದ ಕ್ರಮದಲ್ಲಿ ಬದಲಾವಣೆ ಇದೆಯೇ ಅಥವಾ ಉಸಿರಾಟ ನಿಂತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇದ್ದಲ್ಲಿ ಅದು  ಮೆದುಳಿನ ಮೇಲೆ ಪ್ರಭಾವ ಬೀರುವ ಹಾವಿನ ವಿಷದಿಂದ ಆಗಿರುತ್ತದೆ ಎಂದು ತಿಳಿಯಬೇಕು.
ಇದಕ್ಕೆ ಪ್ರಥಮ ಚಿಕಿತ್ಸೆ ನೀಡಲು  ತಯಾರಾಗಿರಬೇಕು.
ಸಾಮಾನ್ಯ ಉಸಿರಾಟದಲ್ಲಿ ಬದಲಾವಣೆ ಇದ್ದಲ್ಲಿ ಕೃತಕ ಉಸಿರಾಟವನ್ನು ಕೊಟ್ಟು ಎದೆ ಉಬ್ಬುತ್ತದೆ ಮತ್ತು ಕುಗ್ಗುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.  ಉಸಿರಾಟದ ಕ್ರಿಯೆ ನಿಂತಿದ್ದಲ್ಲಿ ಎದೆಯನ್ನು ಅಮುಕಲು ಪ್ರಾರಂಭಿಸಬೇಕು.  ಯಾವುದೇ ಜೀವ ಕಳೆ ಇಲ್ಲದಿದ್ದಲ್ಲಿ ಮೂವತ್ತು ಸಲ ಎದೆಯನ್ನು ಅಮುಕಿ ಎರಡು ಸಲ ಶ್ವಾಸ ತೆಗೆದುಕೊಳ್ಳುವಷ್ಟು ಕಾಲ ತಡೆದು ನಿಲ್ಲಿಸಿ ಮಗದೊಮ್ಮೆ ಎದೆಯನ್ನು ಅಮುಕಲು ಪ್ರಾರಂಭಿಸಬೇಕು.  ಅಮುಕುವಾಗ ಪ್ರತಿ ಸೆಕೆಂಡಿಗೆ ಎರಡುಸಲ ಅಮುಕಬೇಕು. ಹಾಗೂ ೫ ಸೆ ಮಿ ನಷ್ಟು ಸಂಕುಚಿತಗೊಳ್ಳಬೇಕು. ಹೀಗೆ ಐದು ಆವರ್ತನಗಳಷ್ಟು ಅಮುಕಲು ಎರಡು  ನಿಮಿಷದಷ್ಟು ಕಾಲಾವಕಾಶ ತೆಗೆದುಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಆಸ್ಪತ್ರೆ ತಲುಪುವವರೆಗೆ ಮುಂದುವರೆಸಬೇಕು.  ಒಬ್ಬರಿಗೆ ಸುಸ್ತಾದಾಗ ಇನ್ನೊಬ್ಬರಂತೆ ಸರದಿಯಲ್ಲಿ ಈ ಪ್ರಕ್ರಿಯೆ ನಡೆಸಬೇಕು.
ಹಾವು ಕಡಿತವಾದಾಗ ಪ್ರಥಮ ಚಿಕಿತ್ಸೆ – ಏನು ಮಾಡಬಾರದು?
ಭಾರತ ದೇಶದಲ್ಲಿ ಹೆಚ್ಚಾಗಿ ನೀಡುತ್ತಿರುವ ಪ್ರಥಮ ಚಿಕಿತ್ಸೆಯು ಅವೈಜ್ಞಾನಿಕವಾಗಿದ್ದು ಬಹಳ ಅಪಾಯಕಾರಿಯಾಗಿದೆ. ಆದುದರಿಂದ ಹಾವುಕಡಿತದ ಸಂದರ್ಭದಲ್ಲಿ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಕಚ್ಚಿದ ಹಾವನ್ನು ಹಿಡಿಯಲು ಅಥವಾ ಹಿಡಿದು ಕೊಲ್ಲಲು ಸಮಯ ಹಾಳು ಮಾಡಬೇಡಿ.
ಕಚ್ಚಿದ ಹಾವನ್ನು ನೋಡಿದರೆ ವೈದ್ಯರಿಗೆ ಹಾವನ್ನು ಗುರುತಿಸಲು ಸಾಧ್ಯವಾಗುತ್ತದೆ. ಚಿಕಿತ್ಸೆಗೆ ಅನುಕೂಲವಾದೀತು ಎಂಬ ಚಿಂತನೆಯಿಂದ ಅಲ್ಲಿ ನೆರೆದವರಲ್ಲಿ ಕೆಲವರು ಕಚ್ಚಿದ ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸುವುದುಂಟು. ಕಚ್ಚಿದ ಹಾವು ಯಾವುದೆಂದು ವೈದ್ಯರು ತಿಳಿದುಕೊಂಡು ಚಿಕಿತ್ಸೆ ನಡೆಸುವುದಿಲ್ಲ, ಬದಲಾಗಿ ಶರೀರ ಲಕ್ಷಣಗಳನ್ನು ತಿಳಿದುಕೊಂಡು ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಎಲ್ಲಾ ರೀತಿಯ ವಿಷ ಪ್ರತಿರೋಧ ಚಿಕಿತ್ಸೆಯನ್ನು ಅವರು ಪ್ರಾರಂಭಿಸುವುದರಿಂದ ಚಿಕಿತ್ಸೆಗೆ ಹಾವಿನ ಗುರುತು ಅವಶ್ಯಕತೆ ಇಲ್ಲ. ಅಲ್ಲದೆ ಈ ಸಂದರ್ಭದಲ್ಲಿ ಇನ್ನೂ ಇತರರಿಗೆ ಹಾವು ಕಚ್ಚುವ ಸಾಧ್ಯತೆ ಇರುತ್ತದೆ. ಕಚ್ಚಿದ ಹಾವನ್ನು ಗುರುತಿಸಲು ಹುಡುಕಿಕೊಂಡು ಹೋಗುವುದು, ಹಿಡಿಯುವುದು ಮತ್ತು ಅದನ್ನು ಕೊಲ್ಲಲು ಸಮಯವನ್ನು ಹಾಳು ಮಾಡುವ ಅವಶ್ಯಕತೆ ಇಲ್ಲ. ಇದು ಚಿಕಿತ್ಸಾವಿಧಾನದಮೇಲೆ ಪರಿಣಾಮ ಬೀರುವುದಿಲ್ಲ.
ಗಾಯದ ಮೇಲ್ಭಾಗವನ್ನು ಬಳ್ಳಿಯಿಂದ ಬಿಗಿಯಾಗಿ ಕಟ್ಟದಿರಿ. ಗಾಯದ ಮೇಲೆ ಪಟ್ಟಿಯನ್ನು ಒತ್ತಿ  ಸುತ್ತಬೇಡಿ.  
ವಿಷವು ಮೇಲಕ್ಕೆ ಏರಬಾರದೆಂಬ ಚಿಂತನೆಯಿಂದ ಕಡಿತದ ಸ್ಥಳದ ಮೇಲ್ಭಾಗದಲ್ಲಿ  ದಾರ, ನೈಲಾನ್ ಹಗ್ಗ, ಬಟ್ಟೆಗಳನ್ನು  ಉಪಯೋಗಿಸಿ ಬಿಗಿಯಾಗಿ ಕಟ್ಟುವುದು  ಸಾಮಾನ್ಯ.   ಇದರಿಂದಾಗುವ ತೊಂದರೆಗಳು ಹಲವು. ಬಿಗಿಯಾಗಿ ಕಟ್ಟಿದ ಮುಂದಿನ ಭಾಗಕ್ಕೆ ರಕ್ತಸಂಚಾರವಿಲ್ಲದೆ  ಆ ಭಾಗವನ್ನೇ ಕಳೆದುಕೊಳ್ಳುವ ಸಂದರ್ಭಗಳು ಬಂದೊದಗಬಹುದು. ವಿಷವು ದುಗ್ಧನಾಳಗಳ ಮೂಲಕ ಹರಡಿ ದುಗ್ಧಗ್ರಂಥಿಯನ್ನು ಸೇರುತ್ತದೆ ಹೊರತು ರಕ್ತ ಸಂಚಾರದ ಮೂಲಕ ಅಲ್ಲ. ಕಟ್ಟಿದ ಗಂಟನ್ನು ಸಡಿಲಗೊಳಿಸಿದಾಗಲೂ ಒಂದೇಸಮನೆ ವಿಷವೇರುವ ಸಂದರ್ಭಗಳು ಹೆಚ್ಚಾಗಿದ್ದು ಆ ಭಾಗ ರಕ್ತಸಂಚಾರವಿಲ್ಲದೆ ಜೀವಕಳೆ  ಕಳೆದುಕೊಳ್ಳಬಹುದು.
೩.   ಹಾವು ಕಚ್ಚಿದ ಸ್ಥಳದಲ್ಲಿ ಗಾಯಗಳನ್ನು ಮಾಡಿ ಅಗಲಗೊಳಿಸಬೇಡಿ.
ಕೆಲವು ಹಾವುಗಳ ವಿಷಕ್ಕೆ ರಕ್ತ ಹೆಪ್ಪುಗಟ್ಟದಂತೆ ಮಾಡುವ ಗುಣವಿದೆ. ಕಡಿತಕ್ಕೊಳಗಾಗಿ ವಿಷ ರಕ್ತಕ್ಕೆ ಸೇರಿದಾಗ ಗಾಯದಿಂದ ಹೆಪ್ಪುಗಟ್ಟದಂತಹ ರಕ್ತಸ್ರಾವವಾಗುತ್ತದೆ. ಕಚ್ಚಿದ ಸ್ಥಳವನ್ನು ಗಾಯ ಮಾಡಿ ಅಗಲ ಮಾಡುವುದರಿಂದ ಇನ್ನಷ್ಟು ರಕ್ತಸ್ರಾವವಾಗಿ ರಕ್ತದೊತ್ತಡ ಕಡಿಮೆಯಾಗಿ ಸಾವು ಸಂಭವಿಸಬಹುದು.  ಗಾಯವನ್ನು ಇನ್ನಷ್ಟು ಕೊಯ್ದು ಅಗಲ ಮಾಡುವುದರಿಂದ ಗಾಯ ಹಾಕುವಾಗ ನರಗಳು, ಫೇಶಿಗಳ ತಂತುಗಳು ಹಾಗೂ ರಕ್ತನಾಳಗಳು ಕತ್ತರಿಸಲ್ಪಟ್ಟು ಗಾಯ ಮಾಡಲು ಬಳಸುವ ಔಪಕರಣ ಹಾಗೂ ಸ್ಥಳ ಸಂಶ್ಶ್ಲೇಷಿತ ವಾಗಿರದೆ ಸೋಂಕು ತಗಲಬಹುದು.
೪. ಹಾವು ಕಚ್ಚಿದ ಸ್ಥಳವನ್ನು ಸಾಬೂನು ಅಥವಾ ಇತರ ದ್ರವ್ಯಗಳಿಂದ ವಿಷವನ್ನು ತೆಗೆಯುವ ಕಾರಣಕ್ಕಾಗಿ ತೊಳೆಯದಿರಿ.
ಕಡಿತಕ್ಕೊಳಗಾದವನ ಗಾಯವನ್ನು ಸಾಬೂನು, ನೀರು ಅಥವಾ ಇನ್ನಿತರ ದ್ರವ್ಯಗಳಿಂದ ತೊಳೆದಾಗ ಮೇಲ್ಪದರದಲ್ಲಿದ್ದ ಹೆಚ್ಚಿನ ವಿಷ ತೊಳೆಯಲ್ಪಡುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಇದರಿಂದ ದುಗ್ಧನಾಳ ಮುಖಾಂತರ  ಮೇಲಕ್ಕೆ ವಿಷ ಹರಿಯುವಿಕೆಗೆ ಉತ್ತೇಜನ  ನೀಡಿದಂತಾಗುತ್ತದೆ.
೫.   ವಿದ್ಯುತ್ ಬಳಸಿ ಶಾಕ್ ಕೊಡದಿರಿ.
ಗಾಯಕ್ಕೆ ವಿದ್ಯುತ್ ಸ್ಪರ್ಶ ಮಾಡುವುದು ೧೯೮೦ರಲ್ಲಿ ಪ್ರಚಲಿತವಾಗಿತ್ತು. ಇದರಿಂದ ಕಚ್ಚಿದ ಭಾಗದಲ್ಲಿರುವ ವಿಷ ಕೆಡುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಆನಂತರದ ವೈಜ್ಞಾನಿಕ ಪ್ರಯೋಗಗಳಿಂದ  ಈ ತರಹದ ವಿಷ ಕೆಡಿಸುವ ಕ್ರಿಯೆ ಫಲಕಾರಿಯಲ್ಲವೆಂದು ಧೃಢಪಟ್ಟಿದೆ. ಪ್ರಸ್ತುತ ಈ ಪದ್ಧತಿಯನ್ನು ಕೈ ಬಿಡಲಾಗಿದೆ.
೬.     ಗಾಯವನ್ನು ಮಂಜುಗಡ್ಡೆ ಅಥವಾ ಇನ್ನಿತರ ವಿಧಾನಗಳಿಂದ ಶೀತಲೀಕರಿಸುವ ಪ್ರಯತ್ನ ಮಾಡದಿರಿ.
ಗಾಯದ ಭಾಗವನ್ನು ಶೀತಲೀಕರಿಸಿ ವಿಷ ನಿಷ್ಕ್ರಿಯ ಮಾಡುವ  ವಿಧಾನವು ೧೯೫೦ನೆಯ ಇಸವಿಯಲ್ಲಿ ಪ್ರಚಲಿತವಾಗಿದ್ದು ನಂತರದ ವರ್ಷಗಳಲ್ಲಿ ಅದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಧೃಢಪಟ್ಟಿದೆ. ಅಲ್ಲದೆ ಇದರಿಂದಾಗಿ ಆ ಭಾಗಕ್ಕೆ ರಕ್ತ ಸಂಚಾರ ಕಡಿಮೆಯಾಗಿ ಆ ಸ್ಥಳವು ನಿರ್ಜೀವಗೊಳ್ಳುವುದು ಎಂದು ತಿಳಿದು ಅದನ್ನು ಕೈ ಬಿಡಲಾಗಿದೆ.
೭. ಬಾಯಿಯಿಂದ ವಿಷವನ್ನು ಹೀರಲು ಪ್ರಯತ್ನಿಸದಿರಿ.
ಬಾಯಿಯಿಂದ ರಕ್ತವನ್ನು ಹೀರಿ ವಿಷ ತೆಗೆಯುವ ಪ್ರಯತ್ನ ಮಾಡುವುದು ಸೂಕ್ತವಲ್ಲ. ಯಾವುದೇ ವಿಷವನ್ನು ಈ ರೀತಿಯಲ್ಲಿ ತೆಗೆಯಲು ಸಾಧ್ಯವಿಲ್ಲ. ಹೀರುವಂತಹ ಸಾಧನಗಳಿಂದ ರಕ್ತವನ್ನು ಹೀರಿ ತೆಗೆಯುವುದರಿಂದಲೂ ಪರಿಚಲನೆಯಲ್ಲಿರುವ ವಿಷದ ಪ್ರಮಾಣದಲ್ಲಿ ವ್ಯತ್ಯಾಸವಾಗುವುದಿಲ್ಲ. ರಕ್ತ ಹೀರುವುದರಿಂದ ರಕ್ತಸ್ರಾವದೊಡನೆ ಸೋರಿ ಹೋಗುವಂತಹ ವಿಷವನ್ನು ತಡೆಗಟ್ಟಿದಂತಾಗುತ್ತದೆ. ಹಾಗೂ ರಕ್ತ ಸಂಚಾರದ ಕೊರತೆಯಿಂದ  ಆ ಭಾಗಕ್ಕೆ ಜೀವಕಳೆ  ಇಲ್ಲದಂತಾಗುತ್ತದೆ. ವಿಷವನ್ನು ಬಾಯಿಯಿಂದ ಅಥವಾ ಪಂಪ್ ನಿಂದ ಹೀರಿ ಹೊರತೆಗೆಯುವುದು ಉಪಯೋಗಕಾರಿಯಲ್ಲ ಮತ್ತು ತೊಂದರೆಗೊಳಪಟ್ಟ ಭಾಗದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ. ಬಾಯಿಯಿಂದ ವಿಷ ಹೀರುವುದರಿಂದ ರೋಗಿಯ ಗಾಯಕ್ಕೆ ರೋಗಾಣುಗಳು ತಗುಲಿ ಸೋಂಕು ಉಂಟಾಗುತ್ತದೆ.
೮. ಹಾವುಕಡಿತಕ್ಕೊಳಗಾದವನಿಗೆ ಮದ್ಯಪಾನ ಅಥವಾ ಇನ್ನಿತರ ಔಷಧಗಳನ್ನು ಕೊಡದಿರಿ.
ವೈದ್ಯರ ನಿರ್ದೇಶನವಿಲ್ಲದೆ ರೋಗಿಗೆ ಯಾವುದೇ ರೀತಿಯ ಉತ್ತೇಜನಕಾರಿ ಅಥವಾ ನೋವು ನಿವಾರಕ ಔಷಧಗಳನ್ನು ನೀಡಬಾರದು. ಮದ್ಯಪಾನ ಮೆದುಳಿನ ಮೇಲೆ ಪ್ರಭಾವ ಬೀರುವುದರಿಂದ  ಹಾವಿನ ವಿಷದಿಂದ ಮೆದುಳಿನ ಮೇಲೆ ಆಗುವ ಪರಿಣಾಮಗಳನ್ನು ಪತ್ತೆಹಚ್ಚಲು ಆಗುವುದಿಲ್ಲ. ಇತರ ಔಷಧ ಸೇವನೆಗಳಿಂದಲೂ ಕೂಡ ವಿಷದ ಪರಿಣಾಮಗಳು  ಮರೆ ಮಾಚಬಹುದು. ಇದರಿಂದ ವಿಷದ ಪ್ರಭಾವದ ಅಂದಾಜು ನಡೆಸುವಲ್ಲಿ ವ್ಯತ್ಯಾಸವಾಗಬಹುದು.
೯. ಸ್ಥಳೀಯ ಸಾಂಪ್ರದಾಯಿಕ ವೈದ್ಯರಿಯರಲ್ಲಿಗೆ ಕಡಿತಕ್ಕೊಳಗಾದವನನ್ನು ಕೊಂಡು  ಹೋಗಬೇಡಿ. ಯಾವುದೇ ನಾಟಿ ಔಷಧ ಅಥವಾ ಗಿಡಮೂಲಿಕೆಗಳನ್ನು  ಗಾಯಕ್ಕೆ ಹಚ್ಚಬೇಡಿ.
ಈ ತನಕ ಹಾವುಕಡಿತಕ್ಕೆ ಸಾಂಪ್ರದಾಯಿಕ ಔಷಧೋಪಚಾರಗಳಿಂದ ಫಲಕಾರಿ ಚಿಕಿತ್ಸೆ ನಡೆದುದು  ಇಲ್ಲ. ನಾಟಿ ಔಷಧ ಅಥವಾ ಗಿಡ ಮೂಲಿಕೆಗಳಿಂದ  ಹಾವಿನ ವಿಷ ನಿಷ್ಕ್ರಿಯಗೊಳಿಸುವ ಸಾಧ್ಯತೆಗಳು  ಎಲ್ಲೂ ನಿಖರವಾಗಿ  ಧೃಢಪಟ್ಟಿಲ್ಲ. ಅಲ್ಲದೆ ಅವು ಕ್ರಿಮಿರಹಿತ ವೆಂದು ಖಾತ್ರಿಯಲ್ಲದ ಕಾರಣ ಇವುಗಳನ್ನು ಬಳಸುವುದರಿಂದ ಸೋಂಕು ತಗಲುವ ಎಲ್ಲಾ ಸಾಧ್ಯತೆಗಳಿವೆ. ಅಲ್ಲದೆ ವೈಜ್ಞಾನಿಕವಾಗಿ ನಡೆಸಬೇಕಾದ ಚಿಕಿತ್ಸೆ ವಿಳಂಬಗೊಡು ಕಡಿತಕ್ಕೊಳಗಾದವನು ಸಾವನ್ನು ಅಪ್ಪಬಹುದು. ಆದುದರಿಂದ ಸಾಂಪ್ರದಾಯಿಕ ವಿಧಾನಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಒಳ್ಳೆಯದು.
೧೦. ರೋಗಿಯು ಸಾಧ್ಯವಾದಷ್ಟು ಎಚ್ಚರವಾಗಿರುವಂತೆ ನೋಡಿಕೊಳ್ಳಿ.
ಈ ಬಗ್ಗೆ ಸಮಾಜದಲ್ಲಿ ಸರಿಯಾದ ಮಾಹಿತಿ ಮತ್ತು ತಿಳಿವಳಿಕೆ  ನೀಡುವುದು ಆದ್ಯ ಕರ್ತವ್ಯವಾಗಿದೆ.

ಭಾಗ ೫ – ನಂಬಿಕೆಗಳು
೧. ಹಾವಿನ ವಿಷ ಹೀರುವ ಕಲ್ಲುಗಳ ಬಗ್ಗೆ ಜನಪ್ರಿಯವಾದ ನಂಬಿಕೆ ಇದೆ. ನಂಬಿಕೆಯ ಪ್ರಕಾರ ಇಂತಹ ಕಲ್ಲನ್ನು  ಹಾವು ಕಚ್ಚಿದ ಗುರುತಿನ ಮೇಲೆ ಇಟ್ಟರೆ ಹಾವು ಕಡಿತದಲ್ಲಿ ಸ್ರವಿಸಲ್ಪಟ್ಟ ವಿಷವನ್ನು ಹೀರುವುದು. ಆದರೆ ಸತ್ಯಾಂಶವೇನೆಂದರೆ ಇಂತಹ ಕಲ್ಲುಏನನ್ನೂ ಮಾಡುವುದಿಲ್ಲ. ಈ ಕಲ್ಲು ಸ್ವಲ್ಪ ಮಟ್ಟಿಗೆ ಗಾಯದಿಂದ ಹೊರಬರುವ ರಕ್ತವನ್ನು ಹೀರಬಲ್ಲುದು. ಖಂಡಿತವಾಗಿಯೂ ವಿಷವನ್ನಲ್ಲ. ಇಂತಹ ವಿಷ ಹೀರುವ ಕಲ್ಲಿನ ಮೇಲಿನ ಅತೀವ ನಂಬಿಕೆಯಿಂದ ಹಾವು ಕಚ್ಚಿದವನು ಸಾವನ್ನು ಅಪ್ಪಬಹುದು.
೨. ಜನಪದ ವೈದ್ಯಕೀಯ ಪುಸ್ತಕಗಳಲ್ಲಿ ವಿಷಭರಿತ ಹಾವುಗಳಿಗೆ ನಾಲ್ಕುವಿಷದ ಹಲ್ಲುಗಳಿದ್ದು ಅವುಗಳನ್ನು ಮಕರಿ, ಕರಾಲಿ, ಕಾಳರಾತ್ರಿ ಮತ್ತು ಯಮದೂತಿ ಎಂದು ಹೆಸರಿಸಿರುತ್ತಾರೆ. ಕಚ್ಚಿದ ಸ್ಥಳದಲ್ಲಿ ಎರಡು ಹಲ್ಲಿನ ಗುರುತುಗಳಿದ್ದರೆ ಇದಕ್ಕೆ ಔಷಧೋಪಚಾರ ಅಗತ್ಯವಿಲ್ಲ, ಮೂರು ಗುರುತುಗಳು ಕಂಡು ಬಂದಲ್ಲಿ ಇಂತಹವರನ್ನು ಔಷಧೋಪಚಾರ ಮಾಡಿ ಬದುಕಿಸಬಹುದು, ನಾಲ್ಕು ಹಲ್ಲುಗಳ ಗುರುತುಗಳಿದ್ದರೆ ಸಾವು ಖಚಿತ ಎಂದು ಬರೆದಿರುತ್ತಾರೆ. ಆದರೆ ವಾಸ್ತವವಾಗಿ ವಿಚಾರಗಳು ಬೇರೆ. ವಿಷಪೂರಿತ ಹಾವುಗಳಿಗೆ ಎರಡೇ ದಂತಗಳಿರುತ್ತವೆ. ಕೆಲವು ಸಲ ಒಂದೇ ದಂತ ಅಂಕವಿದ್ದು ಇನ್ನೊಂದು ಉದುರಿ ಹೋಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕೂಡ ಹಾವು ವಿಷವನ್ನು ಪರಿಣಾಮಕಾರಿಯಾಗಿ   ಸ್ರವಿಸಬಲ್ಲುದು. ಕೆಲವೊಮ್ಮೆ ದಂತಾಕಗಳ ಗುರುತುಗಳಿಲ್ಲದಿರಬಹುದು. ಅಥವಾ ಅಸ್ಪಷ್ಟವಾಗಿರಬಹುದು. ಆಗಲೂ ಸಹಿತ  ಹಾವು ಕಡಿತ ಮಾರಣಾಂತಿಕವಾಗಬಲ್ಲುದು. ಜನಪದ ವೈದ್ಯಕೀಯ ಪಠ್ಯಗಳನ್ನು ನಂಬುವುದು ಸಾಧುವಲ್ಲ.
೩. ಒಬ್ಬ ಮಾಂತ್ರಿಕ   ದೂರದಿಂದಲೇ  ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ  ತನ್ನ ಮಾಂತ್ರಿಕ ಶಕ್ತಿಯಿಂದ ಚಿಕಿತ್ಸೆ ನೀಡಿ ಗುಣ ಪಡಿಸಬಲ್ಲ, ಆತನಿಗೆ ದೂರವಾಣಿ ಅಥವ ಟೆಲಿಗ್ರಾಂ ಮೂಲಕ ತಿಳಿಸಿದರೆ ಸಾಕು ಎಂಬುದಾಗಿ ಕೆಲವು ವರ್ಷಗಳ ಹಿಂದೆ  ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಚಾರಗಳು ಹಂಚಲ್ಪಡುತ್ತವೆ. ಇಂತಹ ಕಟ್ಟುಕತೆಗಳಿಂದ ದೂರವಿರಿ.
೪. ನಾಗರಹಾವಿನ ಕಡಿತದಿಂದ ಕುಷ್ಠ ರೋಗ ಗುಣವಾಗುತ್ತದೆ ಎಂಬ ನಂಬಿಕೆ ಕೂಡ ಜನರಲ್ಲಿದೆ. ಇದು ಸತ್ಯವಲ್ಲ
೫. ಹಸ್ತ ಸಾಮುದ್ರಿಕದ ಪ್ರಕಾರ ಕೈಯಲ್ಲಿ ಗರುಡ ರೇಖೆ  ಇದ್ದವರಿಗೆ  ನಾಗರ ಹಾವು ಕಚ್ಚಿದರೆ ಅದರ ವಿಷದಿಂದ ಯಾವ ಕೆಟ್ಟ ಪರಿಣಾಮಗಳೂ ಆಗುವುದಿಲ್ಲ.ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.
೬. ಹಾವು ಕಡಿತಕ್ಕೆ ಒಳಗಾದ  ಸ್ಥಳದ ಮೇಲೆ ಕತ್ತರಿಸಲ್ಪಟ್ಟ ಕೋಳಿಯ ಗುದದ್ವಾರವನ್ನು ಇಟ್ಟರೆ ರಕ್ತದಲ್ಲಿರುವ ವಿಷ ಹೀರಲ್ಪಡುವುದೆಂಬ ನಂಬಿಕೆಯೂ ಜನರಲ್ಲಿದೆ. ಆದರೆ ಇದು ಕೂಡ ಮೃತ್ಯುವಿಗೆ ಆಹ್ವಾನ.
೭. ಕಚ್ಚಿದ ವಿಷದ ಹಾವನ್ನು  ಕಚ್ಚಲ್ಪಟ್ಟವನು ತಿರುಗಿಕಚ್ಚಿದರೆ ವಿಷ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಭಾರತದಲ್ಲಿ ಇನ್ನೂ ಕೆಲವು ಕಡೆ ಇದೆ. ಇದು ಬಹಳ ಅಪಾಯಕರಿ ನಂಬಿಕೆ.
೮. ನಾಗರ ಹಾವು ಹೆಡೆ ಬಿಚ್ಚಿದಾಗ ತಲೆ ಅಲ್ಲಾಡಿಸುವಾಗ ತಾನು ಏನೂ ತೊಂದರೆ ಮಾಡುವುದಿಲ್ಲವೆಂಬುದು ಅದರ ಸಂಜ್ಞೆ ಎಂದು ಕೆಲವರ ಅಭಿಪ್ರಾಯ. ಆದರೆ   ತಾನು ತೊಂದರೆಗೊಳಗಾದಾಗ  ಹೆದರಿ ತನ್ನನ್ನು ರಕ್ಷಿಸಿಕೊಂಡು ವೈರಿಯನ್ನು ಕಚ್ಚಲು ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಿಯೆಯೇ  ಹೆಡೆ ಬಿಚ್ಚುವುದಾಗಿದೆ. ಈ ನಂಬಿಕೆಯೂ ಅಪಾಯಕಾರಿ.
೯. ಬ್ರಾಹ್ಮಣ ಶಾಪದಿಂದ ಮಾತ್ರ ನಾಗರ ಹಾವು ಕಚ್ಚುತ್ತದೆ ಎಂಬ ನಂಬಿಕೆ ದಕ್ಷಿಣಭಾರತದ ಕೆಲವು ಜನರಲ್ಲಿ  ಇದೆ. ಇದೂ ಸತ್ಯಕ್ಕೆ ದೂರ.
೧೦. ದಕ್ಷಿಣ ಭಾರತದಲ್ಲಿ ಕೆಲವು ಕಡೆ  ಅಹಿತಕರ ಘಟನೆ ಸಂಭವಿಸಿದರೆ ಅದು ನಾಗದೋಷದಿಂದಾಗಿ ಆದುದು  ಎಂದು ಜೋತಿಷ್ಯರು ಹೇಳುವುದು ಸಾಮಾನ್ಯ. ಇದರಿಂದ ಭಯಪೀಡಿತರಾದ ಜನರಿಗೆ  ನಾಗದೋಷ ಕಳೆದುಕೊಳ್ಳಲು  ಆಶ್ಲೇಷ ಬಲಿ, ಸರ್ಪ ಸಂಸ್ಕಾರ , ನಾಗಮಂಡಲ ಮುಂತಾದ ವಿಧಿಯನ್ನು ನೆರವೇರಿಸಲು ಸಲಹೆ ನೀಡುತ್ತಾರೆ. ಇದಕ್ಕೆ ವೈಜ್ಞಾನಿಕ ತಳಹದಿ ಇಲ್ಲ. ಮುಗ್ಧ ಜನರು ಇದರಿಂದಾಗಿ ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೊಳಗಾಗುತ್ತಾರೆ.
೧೧. ಹಾವುಗಳು ಹಲವು ತಿಂಗಳುಗಳ ಕಾಲ ಅಹಾರವಿಲ್ಲದೆ ಜೀವಿಸಬಲ್ಲವು. ಇದನ್ನು ಗಮನಿಸಿದ ಕೆಲವರು ಹಾವುಗಳು ಗಾಳಿ ಸೇವಿಸಿ ಬದುಕಬಲ್ಲವು ಎಂದು ಹಾವುಗಳನ್ನು ಪವನಹಾರಿ ಎಂದು ಕರೆದಿದ್ದಾರೆ. ಇದು ಒಂದು ತಪ್ಪು ಕಲ್ಪನೆಯಾಗಿದೆ.  
೧೨. ಹೋಮಿಯೋಪತಿಯ ಮಟಿರಿಯಾ ಮೆಡಿಕಾ ಎಂಬ ಪುಸ್ತಕದಲ್ಲಿ ವಿಷದ ಹಾವು ಕಡಿತವಾದಲ್ಲಿ ಅವನಿಗೆ ಪಾನಮತ್ತನಾಗುವಷ್ಟು ವಿಸ್ಕಿಯನ್ನು ಕುಡಿಯಲು ಕೊಟ್ಟರೆ ಇತರ ಚಿಕಿತ್ಸೆ ಅವಶ್ಯಕತೆ ಇಲ್ಲ ಎಂದು ನಮೂದಿಸಿಲಾಗಿದೆ. ಆದರೆ ನರಮಂಡಲ ಹಾಗೂ ನರಸ್ನಾಯುಗಳ ಮೇಲೆ ಪ್ರಭಾವ ಬೀರುವ ವಿಷದ ಹಾವುಗಳಾದ ನಾಗರ ಹಾವು , ಕಾಳಿಂಗ ಸರ್ಪ ಹಾಗೂ ಕಟ್ಟಿನ ಹಾವು ಕಚ್ಚಿದಾಗ ಅಮಲು ಪದಾರ್ಥವನ್ನು ಕೊಟ್ಟರೆ ಆತನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಮರಣ ಸಂಭವಿಸುತ್ತದೆ.
೧೩. ಕೆಲವು ಮಾಂತ್ರಿಕರು ಯಾವುದೋ ಸಸ್ಯದ ಸಣ್ಣ ಗೆಲ್ಲುಗಳಿಂದ ಹಾವು ಕಚ್ಚಿದವನ ತಲೆಗೆ ತಟ್ಟಿದರೆ ವಿಷದಿಂದ ಮುಕ್ತನಾಗುವನು ಎಂದು ನಂಬಿಸುತ್ತಾರೆ. ಇದು ಕೇವಲ ಕಾಲಹರಣವಲ್ಲದೆ ಇದರಿಂದ ವಿಷ ತೆಗೆಯಲು ಸಾಧ್ಯವಿಲ್ಲ.
೧೪. ಹಾವಿಗೆ ಯಾರದರೂ ತೊಂದರೆ ಕೊಟ್ಟರೆ  ಹನ್ನೆರಡುವರುಷಗಳ ಕಾಲ ಅದು ನೆನಪಿಟ್ಟುಕೊಂಡು ಕಚ್ಚಿ ದ್ವೇಷ ಸಾಧಿಸುತ್ತದೆ ಎಂಬ  ನಂಬಿಕೆಯು ವಿದ್ಯಾವಂತ ಜನರಲ್ಲಿ ಕೂಡ  ಪ್ರಚಲಿತ. ಸಿನೆಮಾಗಳಲ್ಲಿ ಕೂಡ ಇದನ್ನು ವೈಭವೀಕರಿಸಿ ಜನರಲ್ಲಿ ತಪ್ಪುನಂಬಿಕೆಯನ್ನು ಬಿತ್ತಿದ್ದಾರೆ. ಇತರ ಸರೀಸೃಪಗಳಂತೆ ಹಾವಿನ ಮೆದುಳು ಕೂಡ ವಿಕಾಸ ಹೊಂದಿಲ್ಲವಾದುದರಿಂದ ದ್ವೇಷ ಭಾವನೆಗಳು ಅವುಗಳಲ್ಲಿ ಇರಲು ಸಾಧ್ಯವಿಲ್ಲ.
೧೫. ಹಾವಿನ ವಿಷವನ್ನು ಮಣಿಕಲ್ಲಿನಿಂದ ತೆಗೆಯಬಹುದೆಂದು ಹೇಳುತ್ತಾ, ಅವುಗಳ ಮಾರಾಟದಿಂದಲೇ ಜೀವನ ಸಾಗಿಸುವ ಅನೇಕ ಹಾವಾಡಿಗರಿದ್ದಾರೆ. ಮಂತ್ರದಿಂದ, ಬೇರು ಔಷಧಿಯಿಂದ ವಾಸಿ ಮಾಡುತ್ತೇವೆಂಬ ಜನರೂ ಇದ್ದಾರೆ.  ಹಾವು ಕಚ್ಚಿಸಿಕೊಂಡ ವ್ಯಕ್ತಿಯನ್ನು ಹನುಮಂತರಾಯನ ದೇವಸ್ಥಾನದಲ್ಲಿ ಮಲಗಿಸಿದರೆ ವಾಸಿಯಾಗುವುದೆಂಬ ಮೂಢನಂಬಿಕೆ ಕೆಲವು ಹಳ್ಳಿಗಳಲ್ಲಿದೆ. ಪ್ರಯೋಗಾಲಯದಲ್ಲಿ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದಾಗ ಯಾವ ಹಾವಾಡಿಗನಾಗಲೀ ಮಂತ್ರವಾದಿಯಾಗಲೀ ಹಾವಿನ ವಿಷದಿಂದ ಸಾಯುವ ಪ್ರಾಣಿಯನ್ನು ಬದುಕಿಸಿದ್ದು ಕಂಡು ಬಂದಿಲ್ಲ.

 ವಿಷದ ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಪ್ರತಿವಿಷ ಚಿಕಿತ್ಸೆ(anti snake venom) ಕೊಡಿಸುವುದೇ ಸರಿಯಾದ ಮಾರ್ಗ